ಅರ್ಜುನ ಆನೆ ಸಾವು ಪ್ರಕರಣ: ಸಮಗ್ರ ತನಿಖೆಗೆ ಆದೇಶ – ಈಶ್ವರ ಖಂಡ್ರೆ

ಬೆಂಗಳೂರು: ಒಂಟಿ ಸಲಗ ಸೆರೆ ಕಾರ್ಯಾಚರಣೆಯ ಸಂದರ್ಭ ಅರ್ಜುನ ಆನೆಯ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ನಿವೃತ್ತ ವನ್ಯಜೀವಿ ಪಾಲಕರ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಕ ಮಾಡಿದ್ದು, ಸಮಗ್ರ ತನಿಖೆ ನಡೆಸಲಿದ್ದಾರೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಹೇಳಿದರು.

ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ನೋವು ತಂದಿದ್ದು, ಅರ್ಜುನನಿಗಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ತನಿಖಾ ಸಮಿತಿ 15 ದಿನದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಕಾರ್ಯಾಚರಣೆಯಲ್ಲಿ ನಮ್ಮ ಅಧಿಕಾರಿಗಳು ಎಲ್ಲ ಮಾನದಂಡ ಅನುಸರಣೆ ಮಾಡಿದ್ದಾರೆ. ಪುಂಡಾನೆ ಏಕಾ ಏಕಿ ದಾಳಿ ಮಾಡಿದೆ. ಹೀಗಾಗಿ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ಆದರು ಕೆಲವರು ಘಟನೆ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್​ಗೆ ಅರವಳಿಕೆ ಮದ್ದು ಬಿದ್ದಿದೆ, ಅರ್ಜುನನಿಗೆ ಗುಂಡು ತಗುಲಿದೆ ಎಂಬ ಆರೋಪವಿದೆ. ಬಾಹ್ಯ ಮರಣೋತ್ತರ ಪರೀಕ್ಷೆ ಆಗಿದೆ. ಈ ವರದಿಯಲ್ಲಿ ಗುಂಡು ತಗುಲಿದ ಬಗ್ಗೆ ಮಾಹಿತಿ ಇಲ್ಲ. ಎಸ್​ಓಪಿ ಅಪ್ಡೇಡ್ ಆಗಬೇಕಿದೆ. ಈ ಬಗ್ಗೆ ಕೂಡ ಕ್ರಮ ವಹಿಸುತ್ತೇವೆ. ಹೀಗಾಗಿ ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದರು.

Comments (0)
Add Comment