ಇಂದು ದಾಖಲೆಯ 15ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ..!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಯ ಮುನ್ನೋಟ ನೀಡುವ 2024–25ನೇ ಸಾಲಿನ ರಾಜ್ಯ ಬಜೆಟ್ ಶುಕ್ರವಾರ (ಫೆಬ್ರವರಿ 16) ಬೆಳಿಗ್ಗೆ 10.15ಕ್ಕೆ ಮಂಡನೆ ಮಾಡಲಿದ್ದಾರೆ. ಅದರಲ್ಲೂ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಮೇಲು ಸಾಕಷ್ಟು ನಿರೀಕ್ಷೆಗಳು ಹುಟ್ಟಿವೆ. 2024-25ನೇ ಸಾಲಿನ ಬಜೆಟ್​ನಲ್ಲಿ ಪಂಚ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಅನಿವಾರ್ಯತೆ ಇದೆ. ಇತ್ತ ನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು, ಸರ್ಕಾರಿ ನೌಕರರು, ರೈತರು ಸೇರಿದಂತೆ ವಿವಿಧ ವಲಯಗಳಿಂದ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಜುಲೈನಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಪರಿಷ್ಕೃತ ಬಜೆಟ್‌ನ ಮೊತ್ತ ₹3.27 ಲಕ್ಷ ಕೋಟಿಯಾಗಿತ್ತು. ಈ ಬಾರಿಯ ಬಜೆಟ್ ಗಾತ್ರವು ₹ 3.50 ಲಕ್ಷ ಕೋಟಿಯಿಂದ ₹ 3.80 ಲಕ್ಷ ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಈವರೆಗೆ 14 ಬಜೆಟ್ ಮಂಡಿಸಿ ರಾಜ್ಯದಲ್ಲಿ ದಾಖಲೆ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬರೆಯ ಮಧ್ಯೆ ವಿತ್ತೀಯ ಶಿಸ್ತಿನ ಪರಿಮಿತಿಯಲ್ಲಿ ವೆಚ್ಚ, ಸಂಪನ್ಮೂಲ ಕ್ರೋಡೀಕರಣದ ‘ಲೆಕ್ಕಾಚಾರ’ಗಳು ಈ ಬಜೆಟ್ ಮೇಲಿನ ಕುತೂಹಲವನ್ನು ಹೆಚ್ಚಿಸಿವೆ.

Comments (0)
Add Comment