ಇನ್ನೂ 12 ಗಂಟೆಗಳಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ ಸಾಧ್ಯತೆ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ತಲುಪಲು ಇನ್ನು ಕೇವಲ 12 ರಿಂದ 14 ಗಂಟೆ ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಕಚೇರಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಮಿಕರನ್ನು ಹೊರತರಲು ಸೃಷ್ಟಿಸಿರುವ ಮಾರ್ಗದಲ್ಲಿ ಕೊರೆಯುವ ಯಂತ್ರಕ್ಕೆ ಅಡ್ಡ ಬಂದ ಕಬ್ಬಿಣದ ಜಾಲರಿಯನ್ನು ತೆಗೆಯಲು ನಮಗೆ ಆರು ಗಂಟೆಗಳು ಹಿಡಿಯಿತು. ಆದರೆ ಒಳ್ಳೆಯ ವಿಚಾರ ಏನೆಂದರೆ 45 ಮೀಟರ್ ವರೆಗೆ ಕೊರೆತದ ನಂತರ ನಿನ್ನೆ ಬಂದ ಅಡಚಣೆಯನ್ನು ನಾವು ಈಗಾಗಲೇ ತೆರೆವುಗೊಳಿಸಿದ್ದೇವೆ. ಈಗ ಪೈಪ್‌ಗಳನ್ನು 45 ಮೀಟರ್‌ಗೂ ಹೆಚ್ಚು ವೆಲ್ಡಿಂಗ್ ಮಾಡಿ ಪೈಪ್ ಜೋಡಿಸುವ ಪ್ರಕ್ರಿಯೆ ಆರಂಭವಾಗಿದೆ. ಕೊರೆಯುವ ಕಾರ್ಯವೂ ಶೀಘ್ರವೇ ಪುನರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕೆಲವೇ ಗಂಟೆಗಳಲ್ಲಿ ಕಾರ್ಯಚರಣೆ ಅಂತಿಮ ಘಟ್ಟ ತಲುಪಲಿದ್ದು, ಅದರ ಬಳಿಕ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರತೆಗೆಯಲು ಇನ್ನೂ ಮೂರು ಗಂಟೆಗಳು ಬೇಕಾಗುತ್ತದೆ. ಅದನ್ನು ಎನ್‌ಡಿಆರ್‌ಎಫ್ ಸಹಾಯದಿಂದ ಮಾಡಲಾಗುವುದು ಎಂದು ಖುಲ್ಬೆ ತಿಳಿಸಿದ್ದಾರೆ.

Comments (0)
Add Comment