ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿದ ವಿಶ್ವದ ದೊಡ್ಡಣ್ಣ – 800 ಕೋಟಿ ಡಾಲರ್ ತುರ್ತು ಸೇನಾ ನೆರವು ಘೋಷಿಸಿದ ಅಮೆರಿಕ

ಹಮಾಸ್ ಉಗ್ರರ ದಾಳಿಗೆ ನಲುಗಿದ ಇಸ್ರೇಲ್‌ಗೆ ವಿಶ್ವದ ದೊಡ್ಡಣ್ಣ ಅಮೆರಿಕ ಸಹಾಯಹಸ್ತ ಚಾಚಿದೆ. 800 ಕೋಟಿ ಡಾಲರ್ ಮೌಲ್ಯದ ತುರ್ತು ಸೇನಾ ನೆರವನ್ನು ಅಮೆರಿಕ ಘೋಷಿಸಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸೇನಾ ನೆರವಿನ ಪ್ಯಾಕೇಜ್ ಅನ್ನು ಅನುಮೋದಿಸಿದ್ದು, ಪ್ಯಾಲೇಸ್ತಿನ್‌ನ ಹಮಾಸ್ ಉಗ್ರರು ದಾಳಿ ನಡೆಸಿರುವ ಇಸ್ರೇಲ್‌ಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಇಸ್ರೇಲ್ ಪ್ರಧಾನಿ ಜೊತೆ ಚರ್ಚೆ ಬಳಿಕ ಪ್ರತಿಕ್ರಿಯಿಸಿದ್ದ ಜೋ ಬೈಡೆನ್, ಇಸ್ರೇಲ್ ಸರ್ಕಾರ ಹಾಗೂ ಅಲ್ಲಿನ ಜನರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಬೆಂಜಮಿನ್ ನೇತಾನ್ಯುಹ ಅವರಿಗೆ ಸ್ಪಷ್ಟವಾಗಿ ಅಮೆರಿಕ‌ ನಿಲುವನ್ನು ತಿಳಿಸಿದ್ದರು. ಅದರ ಬೆನ್ನಲ್ಲೇ ಈಗ 8 ಬಿಲಿಯನ್ ಡಾಲರ್ ಸೇನಾ ನೆರವನ್ನು ಅಮೆರಿಕ ಘೋಷಿಸಿದೆ. ಇಸ್ರೇಲ್‌ಗೆ ತನ್ನನ್ನು ಹಾಗೂ ತನ್ನ ಜನರನ್ನು ರಕ್ಷಿಸಿಕೊಳ್ಳುವ ಹಕ್ಕಿದೆ‌. ಇಸ್ರೇಲ್‌ನ ಈ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಬಳಸಿಕೊಳ್ಳುವ ಯಾವುದೇ ದೇಶ ಅಥವಾ ಗುಂಪು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡುತ್ತದೆ ಎಂದು ಜೋ ಬೈಡೆನ್ ಎಚ್ಚರಿಸಿದ್ದಾರೆ. ಇಸ್ರೇಲ್‌ನ ಮೇಲೆ ವ್ಯಾಪಕವಾದ ಹಮಾಸ್ ದಾಳಿಯ ನಂತರ ಇಸ್ರೇಲ್‌ನ ಪ್ರತಿ ದಾಳಿಯಿಂದ ಕನಿಷ್ಠ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 1,610 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೇಸ್ತಿನ್‌ನ ಆರೋಗ್ಯ ಸಚಿವಾಲಯ ಹೇಳಿದೆ.

Comments (0)
Add Comment