ಇಸ್ರೇಲ್ ಮೇಲಿನ ದಾಳಿ ‘ಐತಿಹಾಸಿಕ ಯಶಸ್ಸು’ ಎಂದ ಪಾಕ್ ಧಾರ್ಮಿಕ ಮುಖಂಡರು

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವು ಪಡೆಯುತ್ತಿದ್ದು, ಈ ವರೆಗೂ ಈ ಯುದ್ಧದಲ್ಲಿ ಕನಿಷ್ಠ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಇತ್ತ ಇಸ್ರೇಲ್‌ಗೆ ಭಾರತ ಸೇರಿ ಬೇರೆ ಬೇರೆ ದೇಶಗಳು ಬೆಂಬಲ ನೀಡುತ್ತಿದ್ರೆ ಆ ಕಡೆ ಪ್ಯಾಲೆಸ್ಟೀನಿಯರ ಪರ ನಿಲ್ಲಲು ಪಾಕ್ ಧಾರ್ಮಿಕ ಮುಖಂಡರು ಪ್ರತಿಜ್ಞೆ ಮಾಡಿದ್ದಾರಲ್ಲದೇ ಇಸ್ರೇಲ್ ಮೇಲಿನ ದಾಳಿ ‘ಐತಿಹಾಸಿಕ ಯಶಸ್ಸು’ ಎಂದು ಬಣ್ಣಿಸಿ ತಮ್ಮ ಕ್ರೌರ್ಯತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಹೌದು ಪಾಕಿಸ್ತಾನದ ಫೈರ್ ಬ್ರಾಂಡ್ ಧಾರ್ಮಿಕ ಮತ್ತು ರಾಜಕೀಯ ನಾಯಕರೊಬ್ಬರು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯನ್ನ “ಐತಿಹಾಸಿಕ ಯಶಸ್ಸು” ಎಂದು ಬಣ್ಣಿಸಿದ್ದಾರೆ ಮತ್ತು ಪ್ಯಾಲೆಸ್ಟೈನ್ ಜನರೊಂದಿಗೆ ನಿಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪೇಶಾವರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮಿಯತ್ ಉಲೇಮಾ-ಇ ಇಸ್ಲಾಂ-ಫಜಲ್ (ಜೆಯುಐ-ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್, ಇಸ್ರೇಲ್ ಮೇಲಿನ ದಾಳಿಯು ಪ್ಯಾಲೆಸ್ಟೈನ್ ಸಮಸ್ಯೆ ಸತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಹೇಳಿದ್ದಾರೆ. “ನಾವು ನಮ್ಮ ಫೆಲೆಸ್ತೀನ್ ಸಹೋದರರೊಂದಿಗೆ ಇದ್ದೇವೆ ಎಂಬ ನಿಲುವನ್ನ ಪುನರುಚ್ಚರಿಸುತ್ತೇವೆ. ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್ ಮುಜಾಹಿದ್ದೀನ್ ನಡೆಸಿದ ದಾಳಿ ಐತಿಹಾಸಿಕ ಯಶಸ್ಸು ಮತ್ತು ಐತಿಹಾಸಿಕ ಯುದ್ಧವಾಗಿದೆ. ಫೆಲೆಸ್ತೀನ್ ಮುಜಾಹಿದ್ದೀನ್ ತಮ್ಮ ಪ್ರದೇಶಗಳನ್ನ ಇಸ್ರೇಲ್ ಸ್ವಾಧೀನದಿಂದ ಮುಕ್ತಗೊಳಿಸಿದೆ” ಎಂದು ಜೆಯುಐ-ಎಫ್ ಮುಖ್ಯಸ್ಥರು ಹೇಳಿದ್ದಾರೆ. ಇನ್ನು ಇಸ್ರೇಲ್‌ನಲ್ಲಿ ಕನಿಷ್ಠ 700 ಜನರು ಸಾವನ್ನಪ್ಪಿದ್ದಾರೆ ಹಾಗೂ 2,100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ – ಇದು ಕನಿಷ್ಠ 50 ವರ್ಷಗಳಲ್ಲಿ ದೇಶಕ್ಕೆ ಮಾರಣಾಂತಿಕ ದಿನವಾಗಿದೆ.

Comments (0)
Add Comment