ಈ ಬಾರಿ ಗಣೇಶ ಚತುರ್ಥಿಗೆ ಸಾರ್ವತ್ರಿಕ ರಜೆಯೇ ಇಲ್ಲ‌ – ಕ್ಯಾಲೆಂಡರ್ ಎಡವಟ್ಟು, ಸರ್ಕಾರದ ಲೆಕ್ಕ ಪ್ರಕಾರ ಒಂದು‌ ದಿನ ಮುಂಚಿತ ರಜೆ..!!

ಈ ಬಾರಿಯ ಶ್ರೀ ಗಣೇಶ ಚತುರ್ಥಿ ಆಚರಿಸುವ ಸಾರ್ವತ್ರಿಕ ರಜೆಯಲ್ಲಿ ಕ್ಯಾಲೆಂಡರ್ ನಲ್ಲೇ ಗೊಂದಲವಿದ್ದು, ಒಂದು ದಿನ ಮುಂಚಿತವಾಗಿ ಸಾರ್ವತ್ರಿಕ ರಜೆ ಇರಲಿದೆ..!

ಈ ಬಾರಿ ಸೆಪ್ಟೆಂಬರ್ 19ರಂದು ಗಣೇಶ ಹಬ್ಬವಿದ್ದು, ಅಂದು ಇರಬೇಕಾದ ರಜೆ ಸೆ.18ರಂದು ಎಂದು ಸರಕಾರದ ಕ್ಯಾಲೆಂಡರ್‌ನಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಕರ್ತವ್ಯದ ದಿನದಲ್ಲೇ ಹಬ್ಬ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರಾವಳಿ ಭಾಗದಲ್ಲಿ ಹಲವರಿಂದ ಆಕ್ಷೇಪಕ್ಕೂ ಕಾರಣವಾಗಿದೆ.

ರಾಜ್ಯ ಸರಕಾರ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.18ರಂದು ವರಸಿದ್ಧಿವಿನಾಯಕ ವೃತ ರಜೆ ಎಂದಿದೆ.

ಪಂಚಾಂಗ ಪ್ರಕಾರ ಸೆ.18ರಂದು ಗೌರಿ ತದಿಗೆ. ಗಣೇಶ ಚತುರ್ಥಿ ಸೆ.19ರಂದು ಇದೆ. ಕರಾವಳಿ ಭಾಗದಲ್ಲಿಯೂ ಗಣೇಶ ಹಬ್ಬ ಸೆ.19ರಂದು ನಡೆಯುವ ಕಾರಣದಿಂದ ರಜೆಯ ವಿಚಾರ ಇದೀಗ ಗೊಂದಲಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತವನ್ನು ಸಂಪರ್ಕಿಸಿ ಗಣೇಶ ಚತುರ್ಥಿ ರಜೆ ಸೆ.19ರಂದೇ ನೀಡುವಂತೆ ಕೋರಿದ್ದಾರೆ. ಆದರೆ “ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರವೇ ತೀರ್ಮಾನ ಮಾಡಬೇಕಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದು ಈ ವಿಚಾರವಾಗಿ ಇನ್ನೂ ಸೂಕ್ತ ನಿರ್ಧಾರ ಕೈಗೊಂಡಿಲ್ಲ.

Comments (0)
Add Comment