ಉಡುಪಿ ನಾಲ್ವರ ಕೊಲೆ ಪ್ರಕರಣ: ಮೂಲ್ಕಿಯಲ್ಲಿ ಸುಟ್ಟ ಬಟ್ಟೆ ಪತ್ತೆ..!

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆರೋಪಿ ಪ್ರವೀಣ್‌ ಚೌಗಲೆಯ ಮಹಜರು ಪ್ರಕ್ರಿಯೆ ಶೇ.98ರಷ್ಟು ಪೂರ್ಣಗೊಂಡಿದೆ. ಪೊಲೀಸರು ಆತನನ್ನು ನ.28ರ ವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದು, ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿರುವ ಕಾರಣ ಆ ದಿನಾಂಕಕ್ಕೂ ಮುನ್ನ ಆತನನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ. ಸಂಪೂರ್ಣ ಮಾಹಿತಿ ಸಂಗ್ರಹ ಪೊಲೀಸರು ನಿರಂತರವಾಗಿ ಆತನನ್ನು ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದು, ಕೃತ್ಯಕ್ಕೆ ಬಳಸಿದ್ದ ಚಾಕು, ಮಾಸ್ಕ್, ಬ್ಯಾಗ್‌ ಸಹಿತ ಇತರ ವಸ್ತುಗಳು ಆತನ ಬಿಜೈಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿವೆ. ಬಿಜೈನಲ್ಲಿರುವ ಮೃತ ಯುವತಿ ಅಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್‌ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್‌ ಚೌಗಲೆ ಕಾರು ಖರೀದಿ ಮಾಡಿದ ಬಳಿಕ ತನ್ನಲ್ಲಿದ್ದ ಸ್ಕೂಟರ್‌ ಅನ್ನು ಸಹೋದ್ಯೋಗಿ ಅಯ್ನಾಝ್ಗೆ ಬಳಕೆ ಮಾಡಲು ನೀಡಿದ್ದ. ಆರೋಪಿ ಆಕೆಗೆ ಸ್ಕೂಟರ್‌ ಅನ್ನು ಮಾರಾಟ ಮಾಡಿದ್ದನೇ ಅಥವಾ ಉಪಯೋಗಿಸಲು ನೀಡದ್ದನೇ ಎಂಬುದನ್ನು ಪೊಲೀಸರು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ. ಸುಟ್ಟ ಬಟ್ಟೆ ಪತ್ತೆ ನೇಜಾರಿನಲ್ಲಿ ಕೊಲೆ ನಡೆಸಿದ ಬಳಿಕ ಅನ್ಯರ ಬೈಕ್‌ ಸಹಾಯದಿಂದ ಸಂತೆಕಟ್ಟೆ, ಕರಾವಳಿ ಬೈಪಾಸ್‌ ಮಾರ್ಗವಾಗಿ ಹೆಜಮಾಡಿ ಟೋಲ್‌ಗೇಟ್‌ ತಲುಪಿದ್ದ. ಅಲ್ಲಿ ಆತ ಮೊದಲೇ ತಂದು ನಿಲ್ಲಿಸಿದ್ದ ಎಂಜಿ ಹೆಕ್ಟರ್‌ ಕಾರಿನ ಮೂಲಕ ಬಪ್ಪನಾಡು ಬಳಿಯ ಪಾಳುಬಿದ್ದ ಕಟ್ಟಡದ ಬಳಿ ತೆರಳಿ ಆತ ರಕ್ತಸಿಕ್ತ ಬಟ್ಟೆಯನ್ನು ಅಲ್ಲಿಯೇ ಸುಟ್ಟುಹಾಕಿದ್ದಾನೆ. ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಆತ ಇದನ್ನು ತಿಳಿಸಿದ್ದು, ಬಟ್ಟೆಯ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಬಳಿಕ ಆತ ಅಲ್ಲಿಂದ ನೇರವಾಗಿ ಮಂಗಳೂರಿನತ್ತ ತೆರಳಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
Comments (0)
Add Comment