ಎಂಜಿನ್ ಸಮಸ್ಯೆಯಿಂದ ದಾರಿ ತಪ್ಪಿದ್ದ ಬೋಟ್: 26 ಜನ ಮೀನುಗಾರರ ರಕ್ಷಣೆ

ಕಾರವಾರ: ಎಂಜಿನ್ ಸಮಸ್ಯೆಯಿಂದ ಅರಬ್ಬಿ ಸಮುದ್ರದಲ್ಲಿ ದಾರಿ ತಪ್ಪಿದ ಬೋಟ್ ನಲ್ಲಿದ್ದ 26 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರವಾರದ ವಾಣಿಜ್ಯ ಬಂದರಿಗೆ ಕರೆತಂದಿರುವ ಘಟನೆ ಮಂಗಳವಾರ ಕಾರವಾರದಲ್ಲಿ ನಡೆದಿದೆ.

ಗೋವಾ ಮೂಲದ ಕ್ರಿಸ್ಟೋ ರೇ ಎಂಬ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿ 3 ಕನ್ನಡಿಗರು ಸೇರಿ 26 ಮಂದಿ ಮೀನುಗಾರರಿದ್ದು, ಅವರನ್ನೆಲ್ಲಾ ರಕ್ಷಣೆ ಮಾಡಲಾಗಿದೆ. ಇವರು ಗೋವಾದ ಪಣಜಿ ಮೂಲಕ ಅಂಕೋಲ ತಾಲೂಕಿನ ಬೇಲಿಕೇರಿ ಬಂದರು ಬಳಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭ ಬೋಟ್ ನಲ್ಲಿ ಎಂಜಿನ್ ಸಮಸ್ಯೆ ಉಂಟಾಗಿತ್ತು. ಬಳಿಕ ಬೋಟ್ 30 ನಾಟಿಕಲ್ ಮೈಲು ದೂರದವರೆಗೆ ತೇಲಿ ಹೋಗಿತ್ತು.

ಇನ್ನು ಬೋಟ್ 30 ನಾಟಿಕಲ್ ಮೈಲು ದೂರದವರೆಗೆ ತೇಲಿ ಹೋದ ಬಳಿಕ ಬಾಹ್ಯ ಸಂಪರ್ಕ ಕಡಿದುಕೊಂಡಿತ್ತು. ಈ ಹಿನ್ನೆಲೆ 4 ದಿನಗಳ ಕಾಲ ಮೀನುಗಾರರು ಸಮುದ್ರದಲ್ಲೇ ಕಾಲಕಳೆದಿದ್ದರು. ಬೇರೆ ಬೋಟನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಸಂಕಷ್ಟದಲ್ಲಿದ್ದ ಅವರನ್ನು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ಬೋಟಿನ ಲೋಕೇಶನ್ ಪತ್ತೆಹಚ್ಚಿ ಮೀನುಗಾರರನ್ನು ಸಂಪರ್ಕಿಸಿದ್ದಾರೆ. ಬಳಿಕ ಸ್ಥಳೀಯ ಮೀನುಗಾರರ ನೆರವಿನಿಂದ ಬೋಟ್ ನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಕೆಟ್ಟುಹೋಗಿದ್ದ ಬೋಟ್ ಅನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಹಾಯದಿಂದ ಕಾರವಾರದ ವಾಣಿಜ್ಯ ಬಂದರಿಗೆ ಕರೆತರಲಾಗಿದೆ.

Comments (0)
Add Comment