ಒಂದು ಪ್ಯಾಕ್ ಬಿಸ್ಕೆಟ್ ನಲ್ಲಿ ಒಂದೇ ಬಿಸ್ಕೆಟ್ ಕಮ್ಮಿ, ಐ.ಟಿ.ಸಿ ಕಂಪೆನಿಗೆ 1 ಲಕ್ಷ ರೂ. ದಂಡ – ಏನಿದು ಪ್ರಕರಣ? ನಡೆದದ್ದೆಲ್ಲಿ?

ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಇದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಕಂಪೆನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಕಡಿಮೆ ಪ್ಯಾಕ್ ಬಿಸ್ಕೆಟ್ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಆದೇಶಿಸಿದೆ.

ಎರಡು ವರ್ಷಗಳ ಹಿಂದೆ ಬೀದಿ ನಾಯಿಗಳಿಗೆ ಆಹಾರ ನೀಡಲು ಚೆನ್ನೈನ ಎಂಎಂಡಿಎ ಮಾಥೂರ್‌ನ ಪಿ. ದಿಲ್ಲಿಬಾಬು ಎಂಬವರು ಖರೀದಿಸಿದ ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಇತ್ತು.

ಈ ಬಗ್ಗೆ ಅವರು ಅಂಗಡಿಯವರಲ್ಲಿ ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಹೀಗಾಗಿ ನೇರವಾಗಿ ಅವರು ಐಟಿಸಿ ಕಂಪೆನಿಯನ್ನು ಸಂಪರ್ಕಿಸಿದರು. ಅಲ್ಲೂ ಸರಿಯಾದ ಉತ್ತರ ಸಿಗದ ಕಾರಣ ಗ್ರಾಹಕ ವ್ಯವಹಾರಗಳ ಇಲಾಖೆಗೆ ದೂರು ನೀಡಿದ್ದರು.

ಪ್ಯಾಕೆಟ್‌ನಲ್ಲಿ 16 ಬಿಸ್ಕತ್ತುಗಳಿವೆ ಎಂದು ಹೇಳಲಾಗಿದ್ದು, ಒಳಗೆ 15 ಬಿಸ್ಕೆಟ್ ಗಳು ಮಾತ್ರ ಇದ್ದವು. ಕಂಪೆನಿಯು ಗ್ರಾಹಕರನ್ನು ಹೇಗೆ ವಂಚಿಸುತ್ತದೆ ಎಂಬುದನ್ನು ಅವರು ಗ್ರಾಹಕರ ವೇದಿಕೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಐ.ಟಿ.ಸಿ ಒಡೆತನದ ಸನ್ ಫೀಸ್ಟ್ ಕಂಪೆನಿಯ ಪ್ರಕಾರ ಒಂದು ಬಿಸ್ಕತ್​​ ತಯಾರಿಕೆ ಬೆಲೆ 75 ಪೈಸೆ. ಕಂಪೆನಿ ದಿನಕ್ಕೆ 50 ಲಕ್ಷ ಬಿಸ್ಕತ್ ಪ್ಯಾಕೆಟ್​​ ತಯಾರಿಸುತ್ತಿದ್ದರೆ ಪ್ರತೀ ಬಿಸ್ಕತ್ ದರದಲ್ಲಿ ದಿನಕ್ಕೆ 29 ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ. ಕಂಪೆನಿಯವರು ಗ್ರಾಹಕರಿಂದ ಹಣ ದೋಚುತ್ತಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಕಂಪೆನಿಗೆ ಸ್ಪಷ್ಟನೆ ನೀಡಲು ಸಾಧ್ಯವಾಗದ ಕಾರಣಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಕಡಿಮೆ ಪ್ಯಾಕ್ ಬಿಸ್ಕೆಟ್ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಿದೆ.

 

Comments (0)
Add Comment