ಕರ್ತವ್ಯ ನಿರತ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ ಶಾಸಕ- ಪ್ರಕರಣ ದಾಖಲು

ಪುಣೆ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯು ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ಸಾಸೂನ್ ಆಸ್ಪತ್ರೆಯಲ್ಲಿ ತೃತೀಯಲಿಂಗಿ ಆರೈಕೆಗಾಗಿ ವಿಶೇಷ ವಾರ್ಡ್ ಅನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಬಂದ ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ಕರ್ತವ್ಯ ನಿರತ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪೊಲೀಸ್ ಪೇದೆ ನೀಡಿದ ದೂರಿನ ಆಧಾರದ ಮೇಲೆ ಸುನೀಲ್ ಕಾಂಬ್ಳೆ ವಿರುದ್ಧ ಸೆಕ್ಷನ್ 353 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಸೂನ್ ಆಸ್ಪತ್ರೆಯಲ್ಲಿ ತೃತೀಯಲಿಂಗಿಗಳಿಗಾಗಿ ಸಿದ್ಧಪಡಿಸಲಾದ ವಾರ್ಡ್ ಅನ್ನು ಮಹಾರಾಷ್ಟ್ರದ ಡಿಸಿಎಂ ಹಾಗೂ ಪುಣೆ ಜಿಲ್ಲೆಯ ಉಸ್ತುವಾರಿ ಸಚಿವ ಅಜಿತ್ ಪವಾರ್ ಉದ್ಘಾಟಿಸಿದರು. ಇನ್ನು ವೈರಲ್ ಆದ ವಿಡಿಯೋದಲ್ಲಿ ಸುನೀಲ್ ಕಾಂಬ್ಳೆ ಅವರು ವೇದಿಕೆಯಿಂದ ಕೆಳಗಿಯುತ್ತಿರುವಾಗ ತನ್ನ ದಾರಿಗೆ ಅಡ್ಡ ಬಂದ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ವ್ಯಕ್ತಿಯು ಬಂಡ್ ಗಾರ್ಡನ್ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ತನ್ನ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ ಶಾಸಕ ಸುನೀಲ್ ಕಾಂಬ್ಳೆ “ನಾನೂ ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾನು ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಯಾರೋ ಅಡ್ಡ ಬಂದಿದ್ದಾರೆ. ನಾನು ಅವನನ್ನು ತಳ್ಳಿ ಮುಂದೆ ಹೋಗಿದ್ದೇನೆ” ಎಂದು ಹೇಳಿದರು.

Comments (0)
Add Comment