ಕಳವಾಗಿದ್ದ ಜೆಪಿ ನಡ್ಡಾ ಪತ್ನಿ ಕಾರು ವಾರಾಣಾಸಿಯಲ್ಲಿ ಪತ್ತೆ; ಇಬ್ಬರು ಅರೆಸ್ಟ್

ದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಳವಾಗಿದ್ದ ಕಾರು ಇದೀಗ ವಾರಾಣಾಸಿಯಲ್ಲಿ ಪತ್ತೆಯಾಗಿದೆ. ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಫರಿದಾಬಾದ್ ಬಳಿಯ ಬಧಕಲ್ ನಿವಾಸಿಗಳಾದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದೆ.

ಮಲ್ಲಿಕಾ ನಡ್ಡಾ ಅವರ ಕಾರು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿನ ಸರ್ವೀಸ್​ ಸೆಂಟರ್​ನಿಂದ ಕಳವಾಗಿತ್ತು. ಮಾ. 19 ರಂದು ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋದಾಗ ಕಾರು ಕಳವಾಗಿದ್ದು, ಈ ಬಗ್ಗೆ ಕಾರು ಚಾಲಕ ಜೋಗಿಂದರ್ ಸಿಂಗ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರು ಪತ್ತೆಗಾಗಿ ಶೋಧ ಕಾರ್ಯ ಪ್ರಾರಂಭಿಸಿದರು. ಬಂಧಿತರು ಕಳವು ಮಾಡಿದ್ದ ಕಾರಿನಲ್ಲಿ ಗೋವಿಂದಪುರಿಗೆ ಬಂದಿದ್ದರು. ನಂತರ ಕಾರಿನಲ್ಲಿ ಬಧಕಲ್​ಗೆ ತೆರಳಿ ಕದ್ದ ಕಾರಿನ ನಂಬರ್​ ಪ್ಲೇಟ್​ ಬದಲಾಯಿಸಿದ್ದರು ಎನ್ನಲಾಗಿದೆ.

Comments (0)
Add Comment