‘ಕಾಂಗ್ರೇಸ್‌ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ ‘- ವಿಜಯೇಂದ್ರ ಆರೋಪ

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದೆ. ಒಂದು ಹೊಸ ಯೋಜನೆ ಬಂದಿಲ್ಲ. ಅರೆಬರೆ ಬೆಂದಿರುವ ಗ್ಯಾರಂಟಿಗಳನ್ನು ನೀಡಿ ಜನರಿಗೆ ವಂಚಿಸುತ್ತಿದೆ. ಅಲ್ಲದೇ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಬಳಿಕ ಮಾತನಾಡಿದ ಅವರು , ನಿನ್ನೆ ಅಧಿಕೃತವಾಗಿ ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ಜವಾಬ್ದಾರಿ ಸ್ವೀಕರಿಸಿದ್ದೇನೆ. ಇಂದು ಚಿತ್ರದುರ್ಗದ ಮಠಾಧೀಶರ ಭೇಟಿ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.

ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುವು ಮೂಲಕ ಹೊಸ ಇತಿಹಾಸ ಸೃಷ್ಠಿಸಬೇಕು ಎನ್ನುವುದು ನಮ್ಮ ಗುರಿ. ರಾಜ್ಯ ಪ್ರವಾಸ ಮಾಡುತ್ತೇನೆ. ಲೋಕಸಭೆ ಜೊತೆಗೆ ಜಿಪಂ, ತಾಪಂ ಚುನಾವಣೆಗೂ ಮಹತ್ವ ನೀಡಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಇದ್ದಾಗ ಶೇ.40 ಭ್ರಷ್ಟಾಚಾರ ಎಂದು ಕಾಂಗ್ರೆಸ್ ದಿನವೂ ಆರೋಪ ಮಾಡುತ್ತಿತ್ತು.ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಮೊದಲ ದಿನದಿಂದಲೇ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ಆಯೋಗದ ವರದಿ ಸಿದ್ದರಾಮಯ್ಯ ಸರಕಾರ ಇದ್ದಾಗ 150 ಕೋಟಿ ಖರ್ಚು ಮಾಡಿ ಅವರಿಗೆ ಖುಷಿ ಬಂದಂತೆ ಮಾಡಿಸಿಕೊಂಡಿದ್ದಾರೆ. ಆದರೆ ಈವರೆಗೆ ಬಿಡುಗಡೆ ಮಾಡಲಿಲ್ಲ. ಅದೊಂದು ಅರೆಬೆಂದ ವರದಿ, ಎಸಿ ರೂಂ ನಲ್ಲಿ ಕುಳಿತು ಸಿದ್ಧಪಡಿಸಿದ್ದಾರೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

 

Comments (0)
Add Comment