ಕಿಡಿಗೇಡಿಗಳಿಂದ ಬಿಆರ್ಟಿಗೆ ಹುಲಿ ಸಂರಕ್ಷಿತ ಅರಣ್ಯಕ್ಕೆ ಬೆಂಕಿ : ಅರಣ್ಯ ನಾಶ

ಚಾಮರಾಜನಗರ : ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವಲಯದ ಕೆ.ಕೆ.ಡ್ಯಾಂ ಬಳಿಯ ಅರಣ್ಯಕ್ಕೆ ಬೆಂಕಿ ಬಿದ್ದು ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಸುಟ್ಟು ನಾಶವಾಗಿದೆ.

ಬೆಳಗ್ಗೆ ಬೈಲೂರು ಅರಣ್ಯ ವಲಯದ ಕೆ.ಕೆ.ಡ್ಯಾಂ ಬಳಿ ಕಾಣಿಸಿಕೊಂಡ ಹೊಗೆಯನ್ನು ಗಮನಿಸಿದ ಗಸ್ತಿನಲ್ಲಿದ್ದ ಸಿಬ್ಬಂದಿ, ಕೂಡಲೇ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದರು. ಅದೇ ವೇಳೆ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಂಡಿದ್ದು, 60ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾದರು. ಹೆಚ್ಚು ಗಾಳಿ ಇದ್ದ ಕಾರಣ ಬೆಂಕಿಯ ಕೆನ್ನಾಲಿ ವೇಗವಾಗಿ ಹರಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕುರುಚಲು ಗಿಡ, ಹುಲ್ಲು ಜಾತಿಯ ಗಿಡಗಳು ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ. ಈ ಭಾಗದಲ್ಲಿ ಹುಲ್ಲಿನ ಜಾತಿಯ ಗಿಡಗಳಿದ್ದು ಬೇಸಿಗೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಒಣಗಿವೆ.

ಇದರಿಂದ ಬೆಂಕಿ ಬಿದ್ದ ಸ್ಥಳದಿಂದ ವೇಗವಾಗಿ ಬೆಂಕಿ ಹರಡುತ್ತಿದೆ. ಬೈಲೂರು ಅರಣ್ಯ ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು, ಯಳಂದೂರು ವಲಯಗಳಲ್ಲೂ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿತ್ತು. ಕೆ.ಕೆ.ಡ್ಯಾಂ ಅರಣ್ಯ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹರಡುವಿಕೆ ಪತ್ತೆ ಹಚ್ಚಲು ಡೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟದ ತುಂಬ ಹೊಗೆ ಹರಡಿರುವುದರಿಂದ ಎಷ್ಟು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎನ್ನುವುದು ತಿಳಿಯುತ್ತಿಲ್ಲ.

Comments (0)
Add Comment