ಕೆಫೆ ಸ್ಫೋಟ ಪ್ರಕರಣ: ಆರೋಪಿಗಳಿಗೆ 3 ದಿನಗಳ ಟ್ರಾನ್ಸಿಟ್ ರಿಮಾಂಡ್

ಕೋಲ್ಕತ್ತಾ: ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಕೋಲ್ಕತ್ತಾದಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಪಾತಕಿ ಮುಸಾವೀರ್ ಶಾಜೀಬ್ ಹುಸೇನ್‌ಹಾಗೂ ಬಾಂಬ್‌ ಇಡುವ ಪ್ಲ್ಯಾನ್‌ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್‌ ಮತೀನ್‌ ತಾಹಾ ಇಬ್ಬರಿಗೂ ಕೊಲ್ಕತ್ತಾ ಕೋರ್ಟ್ ಶುಕ್ರವಾರ 3 ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್‌ಐಎಗೆ ಅನುಮತಿ ನೀಡಿದೆ.

ಬಂಧಿತ ಆರೋಪಿಗಳನ್ನು ಇದಕ್ಕೂ ಮುಂಚೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿ ಮೇರೆಗೆ ಸಿಟಿ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ಗೆ ಅನುಮತಿ ನೀಡಿದ್ದಾರೆ. ಕೋರ್ಟ್ ನಿಂದ ವಶಕ್ಕೆ ಪಡೆದು ಆರೋಪಿಗಳನ್ನು ಎನ್​​ಐಎ ತಂಡ ಬೆಂಗಳೂರಿಗೆ ಕರೆತರಲಿದೆ ಎನ್ನಲಾಗಿದೆ.

ಆರೋಪಿಗಳನ್ನು ಕೋಲ್ಕತ್ತಾದಿಂದ 190 ಕಿಮೀ ದೂರದಲ್ಲಿರುವ ಪುರ್ಬಾ ಮೇದಿನಿಪುರ್ ಜಿಲ್ಲೆಯ ಕಡಲತೀರದ ಪ್ರವಾಸಿ ಪಟ್ಟಣ ದಿಘಾದಲ್ಲಿರುವ ಹೋಟೆಲ್‌ನಿಂದ ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ. ತಾಹಾ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದು, ಶಾಜಿಬ್ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಇಟ್ಟ ಬಳಿಕ ಉಗ್ರ ಮುಸಾವಿರ್ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ. ಬೆಂಗಳೂರಿನಿಂದ ಬಳ್ಳಾರಿ, ಬಳ್ಳಾರಿಯಿಂದ ಕಲಬುರಗಿ, ಕಲಬುರಗಿಯಿಂದ ಹೈದರಾಬಾದ್​​​ಗೆ ಬಸ್​ನಲ್ಲೇ ಪ್ರಯಾಣ ಮಾಡಿದ್ದ. ಈ ಮೊದಲೇ ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದ ಮತೀನ್‌ ಬಳಿ ಹೋಗಿದ್ದ. ಟೈಮ್ ನೋಡಿಕೊಂಡು ಬಾಂಗ್ಲಾದೇಶಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದರು.

Comments (0)
Add Comment