ಕೇಂದ್ರ ಬಜೆಟ್ 2024: ತಿಂಗಳಿಗೆ 300 ಯೂನಿಟ್ ವಿದ್ಯುತ್ ಉಚಿತ, 80 ಕೋಟಿ ಮಂದಿಗೆ ಉಚಿತ ಪಡಿತರ

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಸಕ್ತ ಸಾಲಿನ ಕೊನೆಯ ಮತ್ತು ಮಧ್ಯಂತರ ಮುಂಗಡ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿದ್ದು, ಹತ್ತು ಹಲವು ಜನಪ್ರಿಯ ಘೋಷಣೆಗಳನ್ನು ಹೊರಡಿಸಿದ್ದಾರೆ. ದೇಶದ 80 ಕೋಟಿ ಅರ್ಹ ಜನರಿಗೆ ಉಚಿತ ಪಡಿತರ ನೀಡುವ ಮತ್ತು ಪ್ರತಿ ತಿಂಗಳಿಗೆ ಅರ್ಹ ಫಲಾನುಭವಿಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದೆಂದು ಹೇಳುವ ಮೂಲಕ ಗ್ಯಾರಂಟಿ ಸ್ವರೂಪದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇನ್ನು, ಡಿಬಿಟಿಗೆ 34 ಲಕ್ಷ ಕೋಟಿ ಹಣವನ್ನು ಮೀಸಲಿರಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯನ್ನು ಮುಂದುವರಿಸಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುಂಬರುವ ಐದು ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಮಧ್ಯಮ ವರ್ಗದ ಜನರಿಗೆ ಮನೆ ಖರೀದಿಸಲು ಮತ್ತು ಮನೆ ಕಟ್ಟಿಸಲು ಅನುವಾಗುವಂತೆ ಕಡಿಮೆ ಬಡ್ಡಿದರದಲ್ಲಿ ಹಣಕಾಸಿನ ನೆರವು ಒದಗಿಸಲು ಹೌಸಿಂಗ್ ಸ್ಕೀಂ ಜಾರಿಗೆ ತರಲಾಗುವುದು. ಸಾಮಾಜಿಕ ನ್ಯಾಯದ ಪರ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಧ್ಯಂತರ ಮುಂಗಡ ಪತ್ರವನ್ನು ಮಂಡಿಸುತ್ತಿದ್ದೇನೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ಸಂಪನ್ಮೂಲಗಳ ಸಮಾನ ಹಂಚಿಕೆ ತತ್ವದ ಅನುಸಾರ ಉತ್ಪಾದನಾ ವಲಯದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದರೊಂದಿಗೆ ಕೈಗಾರಿಕಾ ವಲಯಕ್ಕೂ ಉತ್ತೇಜನ ನೀಡಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಅಂತಾ ಇದೇ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದರು. ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಸಚಿವರ ಮಧ್ಯಂತರ ಬಜೆಟ್ ಭಾಷಣದ ಮೇಲೆ ಗಮನ ಕೇಂದ್ರೀಕರಿದ್ದು ಕಂಡು ಬಂತು.

Comments (0)
Add Comment