ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ ಮುಂದೂಡಿದೆ.!

 

ದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಮುಂದೂಡಿದೆ. ಮೇ 26ರ ಬದಲು ಜೂನ್ 16ರಂದು ಪರೀಕ್ಷೆ ನಡೆಯಲಿದೆ.

ಲೋಕಸಭೆ ಚುನಾವಣೆ ಮತದಾನದ ದಿನಾಂಕಗಳ ಘೋಷಣೆ ಆಗಿರುವುದರಿಂದ ಯುಪಿಎಸ್ಸಿ 2024ನೇ ಸಾಲಿನ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯನ್ನು ಜೂನ್ 16ಕ್ಕೆ ಮುಂದೂಡಿದ್ದು, ಆಯೋಗದ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ.

2024 ರ ಮೇ 26ರಂದು ಪ್ರಿಲಿಮ್ಸ್ ಪರೀಕ್ಷೆ ನಿಗದಿಪಡಿಸಲಾಗಿತ್ತು. ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ, ಮತದಾನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಯುಪಿಎಸ್ಸಿ ಪೂರ್ವ ಭಾವಿ ಪರೀಕ್ಷೆ ಮುಂದೂಡಿದೆ.

ಐದು ದಿನಗಳ ನಾಗರಿಕ ಸೇವಾ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 20ರಂದು ನಿಗದಿಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮೊದಲು ಪೂರ್ವಭಾವಿ ಪರೀಕ್ಷೆಗಳಿಗೆ ನೋಂದಣಿಯ ಗಡುವನ್ನು ಆಯೋಗ ಮಾರ್ಚ್ 6ರ ಬದಲಿಗೆ ಮಾರ್ಚ್ 13ರವರೆಗೆ ವಿಸ್ತರಿಸಿದ್ದು, 1056 ಹುದ್ದೆಗಳಿಗೆ ನಾಗರಿಕ ಸೇವಾ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.

 

 

ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ ಮುಂದೂಡಿದೆ.!
Comments (0)
Add Comment