ಕೇರಳದ ನರ್ಸ್‌ಗೆ ಮರಣ ದಂಡನೆ -ನಿಮಿಷಾ ತಾಯಿಗೆ ಯೆಮನ್‌ಗೆ ತೆರಳದಂತೆ ವಿದೇಶಾಂಗ ಸಚಿವಾಲಯ ಸೂಚನೆ

ನವದೆಹಲಿ: ಯೆಮನ್‌ನಲ್ಲಿ ಕೊಲೆ ಪ್ರಕರಣವೊಂದರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರ ತಾಯಿಗೆ ಯೆಮನ್‌ ದೇಶಕ್ಕೆ ತೆರಳದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚಿಸಿದೆ. ಈ ಸನ್ನಿವೇಶದಲ್ಲಿ ಅಲ್ಲಿಗೆ ಹೋಗುವುದು ಸೂಕ್ತವಲ್ಲ ಎಂದು ಸಚಿವಾಲಯ ಹೇಳಿದೆ.

ಪ್ರಿಯಾ ಅವರ ತಾಯಿ ಪ್ರೇಮ ಕುಮಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ದಿಲ್ಲಿ ಹೈಕೋರ್ಟ್‌, ಯೆಮನ್‌ಗೆ ಪ್ರಯಾಣಿಸಲು ಅವರು ಮಾಡಿದ್ದ ವಿನಂತಿಯನ್ನು ಒಂದು ವಾರದೊಳಗೆ ಪರಿಗಣಿಸುವಂತೆ ಕೋರಿತ್ತು.

2017ರಲ್ಲಿ ತನ್ನ ಪುತ್ರಿ ಕೊಲೆಗೈದ ಯೆಮನಿ ನಾಗರಿಕನ ಕುಟುಂಬದ ಜೊತೆ ಸಂಧಾನ ನಡೆಸಲು ಪ್ರೇಮ ಕುಮಾರಿ ಯೆಮನ್‌ಗೆ ಹೋಗಲು ಬಯಸಿದ್ದರು.ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ಶಾಂತಿ ಕುಮಾರಿ, ಪ್ರಿಯಾಳ ಹತ್ತು ವರ್ಷದ ಪುತ್ರಿ ಸಹಿತ ನಾಲ್ಕು ಮಂದಿ ಸಂಬಂಧಿತ ದಾಖಲೆಗಳನ್ನು ವಿದೇಶಾಂಗ ಸಚಿವಾಲಯಕ್ಕೆ ಸಲ್ಲಿಸಿ ಪ್ರಯಾಣಕ್ಕೆ ಅನುಮತಿ ಕೋರಿದ್ದರು.

ಆದರೆ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಸಚಿವಾಲಯ ಆ ದೇಶದಲ್ಲಿದ್ದ ಭಾರತೀಯ ದೂತಾವಾಸವನ್ನು ಅಲ್ಲಿನ ಪ್ರತಿಕೂಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದಿಜ್‌ಬೌತಿ ಎಂಬಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿತಲ್ಲದೆ ಅಲ್ಲಿ ರಾಜತಾಂತ್ರಿಕ ಉಪಸ್ಥಿತಿಯಿಲ್ಲದೇ ಇರುವುದರಿಂದ ಅವರ ಯೋಗಕ್ಷೇಮ ನೋಡಲು ಸಾಧ್ಯವಿಲ್ಲ ಪ್ರಯಾಣಿಸುವ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಸಚಿವಾಲಯ ಹೇಳಿದೆ.

 

Comments (0)
Add Comment