ಕೇರಳ ನರ್ಸ್ ನ ಮರಣದಂಡನೆ ಶಿಕ್ಷೆಯ ಮೇಲ್ಮನವಿ ವಜಾಗೊಳಿಸಿದ ಯೆಮೆನ್ ಸುಪ್ರಿಂ ಕೋರ್ಟ್

ಯೆಮೆನ್: ಯೆಮೆನ್‌ ಪ್ರಜೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್‌ ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ಯೆಮೆನ್‌ ಪ್ರಜೆ ತಲಾಲ್‌ ಅಬ್ದೊ ಮಹ್ದಿ ಅವರ ಬಳಿಯಿದ್ದ ತನ್ನ ಪಾಸ್‌ಪೋರ್ಟ್ ಹಿಂಪಡೆಯುವ ಸಲುವಾಗಿ ಆತನಿಗೆ ಮತ್ತು ಬರಿಸುವ ಚುಚ್ಚುಮದ್ದು ನೀಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಿಮಿಷಾ 2017ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದ ಭಾರತೀಯ ಪ್ರಜೆಗಳಿಗೆ ಯೆಮೆನ್‌ ಗೆ ಭೇಟಿ ನೀಡದಂತೆ ನಿಷೇಧ ಹೇರಲಾಗಿದೆ. ಈ ನಿಷೇಧದ ನಡುವೆಯು ನಿಮಿಷಾ ತಾಯಿ ತನಗೆ ಯೆಮೆನ್‌ ಗೆ ತೆರಳಲು ಅವಕಾಶ ನೀಡುವಂತೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಗುರುವಾರ, ನಿಮಿಷಾ ತಾಯಿ ಯೆಮೆನ್‌ ಗೆ ತೆರಳುವ ಕುರಿತು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇನ್ನು ಅರ್ಜಿದಾರರಾದ ನಿಮಿಷಾ ತಾಯಿ ಪರ ವಕೀಲರಾದ ಸುಭಾಶ್‌ ಚಂದ್ರನ್‌ ಕೆಆರ್‌ ಅವರು ತನ್ನ ಕಕ್ಷಿದಾರರು ಮಗಳನ್ನು ಉಳಿಸಿಕೊಳ್ಳಲು ಹತ್ಯೆಯಾದ ವ್ಯಕ್ತಿಯ ಕುಟುಂಬದವರೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕು. ಇದಕ್ಕಾಗಿ ಕಕ್ಷಿದಾರರು ಯೆಮೆನ್ ಗೆ ಖುದ್ದು ಭೇಟಿ ನೀಡಿ ಕುಂಟುಬದವರನ್ನು ಮಾತನಾಡಿಸಬೇಕು ಎಂದು ವಾದ ಮಂಡಿಸಿದ್ದರು.

Comments (0)
Add Comment