ಗವರ್ನರ್ ಬಿಟ್ಟು ಹೋದ ವಿಮಾನ : ಕ್ಷಮೆಯಾಚಿಸಿದ ಏರ್ ಏಷ್ಯಾ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ವಿಮಾನ ಟೇಕಾಪ್ ಆದ ಘಟನೆಗೆ ಸಂಬಂಧ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಕ್ಷಮೆಯಾಚಿಸಿದೆ. ‘ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಮತ್ತು ತನಿಖೆ ಕೈಗೊಂಡಿದ್ದು ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ರಾಜ್ಯಪಾಲರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ’ ಎಂದು ಸಂಸ್ಥೆ ವಕ್ತಾರರು ತಿಳಿಸಿದ್ದಾರೆ. ಜುಲೈ 27ರಂದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪೂರ್ವ ನಿಗದಿತ ಸಭೆಗೆ ಹಾಜರಾಗಲು ಹೈದರಾಬಾದ್ ಗೆ ಪ್ರಯಾಣಿಸಲು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಧ್ಯಾಹ್ನ 2 ಗಂಟೆಗೆ ಏರ್ ಏಷ್ಯಾ ವಿಮಾನದ ಮೂಲಕ ಹೈದರಾಬಾದ್ ಗೆ ತೆರಳಬೇಕಿತ್ತು. ವಿಮಾನ ನಿಲ್ದಾಣಕ್ಕೆ ಬಂದ ರಾಜ್ಯಪಾಲರನ್ನು ವಿಐಪಿ ಲಾಂಜ್ ನಲ್ಲಿ ಕುಳ್ಳಿರಿಸಿದ ಅಧಿಕಾರಿಗಳು, ಅವರ ಲಗೇಜ್‍ಗಳನ್ನು ವಿಮಾನದಲ್ಲಿ ಇರಿಸಲು ಏರ್ ಏಷ್ಯಾದ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಲಗೇಜ್ ಹಾಕಿಸಿಕೊಂಡ ವಿಮಾನದ ಸಿಬ್ಬಂದಿ, ಅವರನ್ನು ಬಿಟ್ಟು ಹೈದರಾಬಾದ್ ಕಡೆಗೆ ಹಾರಾಟ ನಡೆಸಿದ್ದಾರೆ. ಆನಂತರ, 90 ನಿಮಿಷಗಳ ನಂತರ ರಾಜ್ಯಪಾಲರು ಇನ್ನೊಂದು ವಿಮಾನದ ಮೂಲಕ ಹೈದಾರಬಾದ್ ಗೆ ಪ್ರಯಾಣ ಬೆಳೆಸಿದರು ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ರಾಜ್ಯಪಾಲರ ಕಚೇರಿಯಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮತ್ತು ಏರ್ ಏಷ್ಯಾಗೆ ಪತ್ರ ಬರೆದಿದೆ. ಹೈದರಾಬಾದ್ ಗೆ ಪ್ರಯಾಣ ಬೆಳೆಸುವ ಉದ್ದೇಶದಿಂದ ರಾಜ್ಯಪಾಲರು 15 ನಿಮಿಷಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆದರೂ ಅಧಿಕಾರಿಗಳು ಅವರಿಗೆ ವಿಮಾನ ಹತ್ತಲು ಅನುಮತಿ ನೀಡಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಘಟನೆ ಬಗ್ಗೆ ರಾಜ್ಯಪಾಲರ ಶಿಷ್ಟಾಚಾರ ಅಧಿಕಾರಿ ದೂರು ಕೂಡಾ ದಾಖಲಿಸಿದ್ದಾರೆ.

Comments (0)
Add Comment