ಅಡುಗೆ ಅನಿಲ ಆಧಾರ್ ಇ-ಕೆವೈಸಿ ಕುರಿತು ಸ್ಪಷ್ಟ ಮಾಹಿತಿ ಇಲ್ಲಿದೆ.!

ಬೆಂಗಳೂರು:  ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಬೇಕಿದೆ. ಇದಕ್ಕೆ ಅಂತಿಮ ದಿನಾಂಕ ನಿಗದಿ ಮಾಡಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದು, ಜನರಲ್ಲಿ ಗೊಂದಲ ಮೂಡಿಸಿದೆ.
ಆದ್ದರಿಂದ ಸ್ಪಷ್ಟನೆಯನ್ನು ನೀಡಲಾಗಿದೆ. ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಿಲ್ಲ ಎಂದು ತಿಳಿಸಲಾಗಿದೆ.
ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು, ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ಜನರು ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್‌ ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ.
ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯ್ಲ್ ಒನ್ ಮತ್ತು ವಿಟ್ರನ್ ಹೆಚ್‍ಪಿ ಗ್ಯಾಸ್ ಈ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಹ ಇ-ಕೆವೈಸಿ ಮಾಡಿಸಬಹುದಾಗಿದೆ ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಟಣೆ ತಿಳಿಸಿದೆ. ಏಕೆ ಇ-ಕೆವೈಸಿ ಅಗತ್ಯ?; ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಸಹ ಇ-ಕೆವೈಸಿ ಮಾಡಿಸಬೇಕಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಹೊಂದಿದ್ದರೆ ಅದನ್ನು ಪತ್ತೆ ಹಚ್ಚುವ ಸಲುವಾಗಿ ಗ್ಯಾಸ್ ಏಜೆನ್ಸಿಗಳು ಇ-ಕೆವೈಸಿ ಮಾಡಿಸಬೇಕು ಎಂದು ಹೇಳಿವೆ. ಗೃಹ ಬಳಕೆ ಸಿಲಿಂಡರ್‌ಗಳ ದುರ್ಬಳಕೆ ತಡೆಯಲು ತೈಲ ಕಂಪನಿಗಳು ಏಜೆನ್ಸಿಗಳಿಗೆ ಗ್ರಾಹಕರ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿವೆ. ಆದರೆ ಇದಕ್ಕೆ ಅಂತಿಮ ದಿನಾಂಕ ನಿಗದಿಗೊಳಿಸಿಲ್ಲ. ಅಂತಿಮ ದಿನಾಂಕ ನಿಗದಿ ಮಾಡಲಾಗಿದೆ ಎಂಬ ವದಂತಿ ಹಿನ್ನಲೆಯಲ್ಲಿ ಜನರು ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.
ಒಂದು ವೇಳೆ ಒಟಿಪಿ ಮೂಲಕ ಇ-ಕೆವೈಸಿ ಮಾಡಿದರೆ ನಿಜವಾದ ಗ್ರಾಹಕರು ಯಾರಿದ್ದಾರೆ? ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ. ಆದ್ದರಿಂದ ಆಧಾರ್ ಮೂಲಕ ಈ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ. ಇ-ಕೆವೈಸಿ ಮಾಡಿಸದಿದ್ದರೆ ಸಿಲಿಂಡರ್ ಸಂಪರ್ಕ ಸಿಗುವುದಿಲ್ಲ ಎಂದು ಆತಂಕಗೊಂಡ ಜನರ ಎಲ್ಲಾ ಕೆಲಸ ಬಿಟ್ಟು ಏಜೆನ್ಸಿಗಳಿಗೆ ಆಗಮಿಸುತ್ತಾರೆ. ಗ್ರಾಹಕರ ಬೆರಳ ಗುರುತು, ಮುಖ ಚಹರೆಯನ್ನು ಮಾತ್ರ ಪರಿಗಣಿಸಿ ಇ-ಕೆವೈಸಿ ಮಾಡಿಸಬೇಕು ಎಂದು ತೈಲ ಕಂಪನಿಗಳು ಏಜೆನ್ಸಿಗಳಿಗೆ ಸೂಚನೆ ನೀಡಿವೆ. ಎರಡು ವಾರದ ಹಿಂದೆ ಈ ಆದೇಶ ಹೊರಡಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬ ಸುದ್ದಿ ಹಬ್ಬಿದ್ದು, ಜನರ ಗೊಂದಲಕ್ಕೆ ಕಾರಣ ಕಾರಣವಾಗಿದೆ. ವಾಣಿಜ್ಯ ಸಿಲಿಂಡರ್‌ಗಿಂತ ಗೃಹ ಬಳಕೆ ಸಿಲಿಂಡರ್‌ಗಳ ಬೆಲೆಗಳು ಕಡಿಮೆ. ಸಾಕಷ್ಟು ಜನರು ಒಂದಕ್ಕಿಂತ ಹೆಚ್ಚು ಸಂಪರ್ಕವನ್ನು ಪಡೆದುಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ಆರೋಪವಾಗಿದೆ. ಇದರಿಂದಾಗಿ ನಷ್ಟ ಅನುಭವಿಸುತ್ತಿರುವ ತೈಲ ಕಂಪನಿಗಳು, ನಿಜವಾದ ಗ್ರಾಹಕರನ್ನು ಪತ್ತೆ ಹಚ್ಚಲು ಇ-ಕೆವೈಸಿ ಮಾಡಿಸುತ್ತಿವೆ.
ಹೀಗೆ ಮಾಡಿದರೆ ಅರ್ಹರಿಗೆ ಸಬ್ಸಿಡಿ ದರದಲ್ಲಿ ಸರಿಯಾಗಿ ಸಿಲಿಂಡರ್ ವಿತರಣೆಯಾಗಲಿದೆ. ಅಲ್ಲದೇ ತೈಲ ಕಂಪನಿಗಳ ಮೇಲಿನ ಹೊರೆ ಸಹ ಕಡಿಮೆಯಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ. ಆದರೆ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ನಿಗದಿ ಮಾಡಿಲ್ಲ.
Comments (0)
Add Comment