ಚರ್ಮದ ಕ್ಯಾನ್ಸರ್‌ಗೆ ಸೋಪ್ ಕಂಡುಹಿಡಿದು ವಿಶ್ವದ ಗಮನ ಸೆಳೆದ 14ರ ಪೋರ!

ವಾಷಿಂಗ್ಟನ್: ಯಾವುದೇ ಮನುಷ್ಯನಿಗೆ ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ. ಬದಲಾಗಿ ಸಾಧಿಸಬೇಕೆಂಬ ಛಲ ಮತ್ತು ಆತ್ಮವಿಶ್ವಾಸ ಇದ್ದರೆ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ 14ನೇ ವಯಸ್ಸಿನಲ್ಲಿ ಚರ್ಮದ ಕ್ಯಾನ್ಸರ್‌ಗೆ ಸೋಪ್ ಕಂಡುಹಿಡಿದ ಬಾಲಕ ಉದಾಹರಣೆ.

ಈ ಬಾಲಕನ ವಯಸ್ಸು ಕೇವಲ 14. ಆದರೆ ಆತ ಅಭಿವೃದ್ಧಿಪಡಿಸಿರುವ ಸೋಪ್ ಒಂದು ಇದೀಗ ವಿಶ್ವದ ಗಮನ ಸೆಳೆದಿದ್ದು, 2023ರ ಯುವ ವಿಜ್ಞಾನಿಗಳ ಪಟ್ಟಿಯಲ್ಲಿ ಈತ ಸ್ಥಾನ ಪಡೆದಿದ್ದಾನೆ.

ಇನ್ನು ಈತನ ಹೆಸರು ಹೇಮನ್ ಬೆಕೆಲೆ. ಅಮೆರಿಕದ ಫೈರ್‌ಫಾಕ್ಸ್ ಕಂಟ್ರಿಯ ಫ್ರೋಸ್ಟ್‌ ಮಿಡ್ಲ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇದೀಗ ಈ ಬಾಲಕನ ಸಂಶೋಧನೆಯನ್ನು ಗುರುತಿಸಿರುವ ಅಮೆರಿಕದ ತಜ್ಞರು ಆತನನ್ನು ಯುವ ವಿಜ್ಞಾನಿಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ.

ಈ ಬಾಲಕ ಕಂಡುಹಿಡಿರುವ ಸೋಪ್‌ನ ಬೆಲೆ 10 ಅಮೆರಿಕನ್ ಡಾಲರ್‌ಗಿಂತಲೂ ಕಡಿಮೆ! ಈ ಸೋಪಿನಲ್ಲಿ ಇರುವ ರಾಸಾಯನಿಕ ವಸ್ತುಗಳು ಚರ್ಮದ ರಕ್ಷಣೆ ಮಾಡುವ ಜೀವಕೋಶಗಳನ್ನು ಪ್ರಚೋದಿಸುತ್ತವೆ. ಚರ್ಮದಲ್ಲಿ ಕ್ಯಾನ್ಸರ್‌ ಸೃಷ್ಟಿಸಿರುವ ಕೋಶಗಳ ವಿರುದ್ಧ ಹೋರಾಟ ಮಾಡಲು ಜೀವ ಕೋಶಗಳು ಶಕ್ತವಾಗುತ್ತವೆ.

ಹೇಮನ್ ಬೆಕೆಲೆ ಇಥಿಯೋಪಿಯಾ ದೇಶದಲ್ಲಿ ಇದ್ದಾಗ ಸೋಪ್ ತಯಾರಿಕೆಯ ಉಪಾಯ ಹೊಳೆದಿದ್ದು, ಅಲ್ಲಿನ ಜನರು ಸೂರ್ಯನಿಗೆ ತಮ್ಮ ದೇಹವನ್ನು ಒಡ್ಡಿಕೊಳ್ಳುತ್ತಿದ್ದರು. ಸೂರ್ಯನ ಬಿಸಿಲಿನಲ್ಲೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರು ಚರ್ಮದ ಕ್ಯಾನ್ಸರ್‌ಗೆ ತುತ್ತಾಗುವ ಪ್ರಮಾಣ ಹೆಚ್ಚಾಗಿತ್ತು. ಅದನ್ನು ಗಮನಿಸಿ ಶಾಲೆಯಲ್ಲಿ ಹೊಸ ಸಂಶೋಧನೆಯ ಸ್ಪರ್ಧೆ ಘೋಷಣೆ ಆದಾಗ ನನಗೆ ಇಥಿಯೋಪಿಯಾ ದೇಶದಲ್ಲಿ ಆದ ಅನುಭವ ನೆನಪಾಯ್ತು. ಹೀಗಾಗಿ ನಾನು ಚರ್ಮದ ಕ್ಯಾನ್ಸರ್‌ಗೆ ಔಷಧ ಕಂಡು ಹಿಡಿಯುವ ಸಂಶೋಧನೆ ನಡೆಸಲು ಮುಂದಾದೆ ಎಂದು ಹೇಮನ್ ಬೆಕೆಲೆ ತಿಳಿಸಿದ್ದಾನೆ.

ಈ ಸಂಶೋಧನೆಗೆ ಬಾಲಕ ಹೇಮನ್ ಬೆಕೆಲೆ ಹಲವು ತಿಂಗಳ ಕಾಲ ಶ್ರಮ ವಹಿಸಿದ್ದು, ಸೋಪ್ ತಯಾರಿಕೆಗೆ ಫಾರ್ಮುಲಾ ರೂಪಿಸಿ ಅದನ್ನು ಹಲವು ರೀತಿಯ ಪ್ರಯೋಗಗಳಿಗೆ ಒಳಪಡಿಸಿ ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

 

Comments (0)
Add Comment