ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ವಿದ್ಯುತ್‌ ತಂತಿ – ಇಬ್ಬರು ಪ್ರಯಾಣಿಕರ ಸಾವು

ರಾಂಚಿ: ಆಂಧ್ರಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿ 13 ಜನ ಮೃತಪಟ್ಟ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ವಿದ್ಯುತ್‌ ತಂತಿಯು ರೈಲಿನ ಮೇಲೆ ಬಿದ್ದು, ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ

ರೈಲಿನ ಮೇಲೆ ವಿದ್ಯುತ್‌ ತಂತಿ ಬಿದ್ದ ಕಾರಣ ಕೂಡಲೇ ರೈಲು ಸಂಚಾರ ಸ್ಥಗಿತವಾಗಿದೆ. ಆಗ ಉಂಟಾದ ಎಳೆತದ ತೀವ್ರತೆಗೆ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೊಡೆರ್ಮಾ ಜಿಲ್ಲೆಯ ಪರ್ಸಾಬಾದ್‌ ಬಳಿಯ ಗೊಮೊಹ್‌ ಹಾಗೂ ಕೊಡೆರ್ಮಾ ರೈಲು ನಿಲ್ದಾಣದ ಮಧ್ಯ ಅಪಘಾತ ಸಂಭವಿಸಿದೆ. ಪುರಿಯಿಂದ ದೆಹಲಿಗೆ ತೆರಳುತ್ತಿದ್ದ ಪುರುಷೋತ್ತಮ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ವಿದ್ಯುತ್‌ ತಂತಿ ಕಡಿದು ಬಿದ್ದಿದೆ. ಆಗ ರೈಲಿನ ಚಾಲಕ ಎಮರ್ಜನ್ಸಿ ಬ್ರೇಕ್‌ ಹಾಕಿದ್ದಾರೆ. ಇದರಿಂದಾಗಿ ಜರ್ಕ್‌ ಉಂಟಾಗಿದ್ದು, ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಕಾಏಕಿ ರೈಲು ನಿಂತ ಕಾರಣ ಪ್ರಯಾಣಿಕರು ಕೆಳಗೆ ಇಳಿಯಲು ಯತ್ನಿಸಿದ್ದು, ಇದೇ ವೇಳೆ ನೂಕುನುಗ್ಗಲು ಉಂಟಾಗಿದೆ.

ಗಂಟೆಗೆ ಸುಮಾರು 130 ಕಿಲೋಮೀಟರ್‌ ವೇಗದಲ್ಲಿ ಚಲಿಸುತ್ತಿದ್ದ ರೈಲು ಸಂಚಾರ ಏಕಾಏಕಿ ಸ್ಥಗಿತಗೊಂಡ ಕಾರಣ ಜರ್ಕ್‌ ಉಂಟಾಗಿದೆ. ಕೆಲವು ಜನರಿಗೆ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧನ್‌ ಬಾದ್‌ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್‌ ಅಮರೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಬಳಿಕ ಡೀಸೆಲ್‌ ಎಂಜಿನ್‌ ಅಳವಡಿಸಿದ್ದು, ರೈಲು ಸಂಚಾರ ಆರಂಭವಾಗಿದೆ ಎಂದು ತಿಳಿದುಬಂದಿದೆ.

Comments (0)
Add Comment