ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ

ಚಿಕಾಗೋ : ಅಮೇರಿಕಾದಲ್ಲಿ ಒಂದಾದ ಮೇಲೆ ಒಂದರಂತೆ ನಾಲ್ವರು ಭಾರತೀಯ ವಿದ್ಯಾರ್ಥಿಗಳ ಸಾವಿನ ಬೆನ್ನಲ್ಲೇ ಮತ್ತೋರ್ವ ಭಾರತೀಯ ವಿದ್ಯಾರ್ಥಿಯ ಮೇಲೆ ದಾಳಿ ನಡೆದಿದೆ.

ಚಿಕಾಗೋದಲ್ಲೀ ಈ ಘಟನೆ ನಡೆದಿದ್ದು ಹೈದರಾಬಾದ್ ಮೂಲದ ಸೈಯದ್ ಮಜಾಹಿರ್ ಅಲಿ ದರೋಡೆಕೋರರಿಂದ ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ.

ಅಲಿ ಅಮೆರಿಕಾದ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕಾಗೋದ ಕ್ಯಾಂಪ್ಬೆಲ್ ಅವೆನ್ಯೂನಲ್ಲಿರುವ ಅಲಿ ಅವರ ಮನೆಯ ಬಳಿ ದಾಳಿಕೋರರು ಹಲ್ಲೆ ನಡೆಸಿದ್ದು, ದಾಳಿಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಅಲಿ ದಾಳಿಯ ಬಳಿಕ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಲಿ ಅವರ ಹಣೆ, ಮೂಗು ಮತ್ತು ಬಾಯಿಯಲ್ಲಿ ರಕ್ತ ಸುರಿಯುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಅಲಿ “ನಾಲ್ಕು ಜನರು ನನ್ನ ಮೇಲೆ ದಾಳಿ ಮಾಡಿದರು, ನಾನು ನನ್ನ ಕೈಯಲ್ಲಿ ಆಹಾರದ ಪ್ಯಾಕೆಟ್ನೊಂದಿಗೆ ಮನೆಗೆ ಮರಳುತ್ತಿದ್ದೆ. ನಾನು ನನ್ನ ಮನೆಯ ಬಳಿ ತಲುಪಬೇಕಾದರೆ ನಾಲ್ಕು ಜನರು ಹಲ್ಲೆ ನಡೆಸಿದರು, ದಯವಿಟ್ಟು ನನಗೆ ಸಹಾಯ ಮಾಡಿ” ಎಂದು ಕೇಳಿಕೊಂಡಿದ್ದಾರೆ.

ಜೊತೆಗೆ ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅಲಿ “ಅಮೆರಿಕಾ ನನ್ನ ಕನಸಿನ ದೇಶ. ನಾನು ನನ್ನ ಕನಸುಗಳನ್ನು ಪೂರೈಸುವ ಸಲುವಾಗಿ ಹಾಗೂ ನನ್ನ ಸ್ನಾತಕೋತ್ತರ ಪದವಿ ಮಾಡಲು ಇಲ್ಲಿಗೆ ಬಂದಿದ್ದೇನೆ, ಆದರೆ ನಿನ್ನೆ ನಡೆದ ಘಟನೆಯಿಂದ ನನಗೆ ಆಘಾತವಾಗಿದೆ” ಎಂದಿದ್ದಾರೆ.

ಸೈಯದ್ ಮಜಾಹಿರ್ ಪತ್ನಿ ಸೈಯದಾ ರುಕುಲಿಯಾ ಫಾತಿಮಾ ರಿಜ್ವಿ ವಿಡಿಯೋ ಮೂಲಕ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಳಿ ಸಹಾಯ ಮಾಡುವಂತೆ ಕೋರಿದ್ದು, “ಅಮೇರಿಕದ ಚಿಕಾಗೋದಲ್ಲಿರುವ ನನ್ನ ಗಂಡನ ಸುರಕ್ಷತೆ ಬಗ್ಗೆ ನನಗೆ ತುಂಬಾ ಭಯವಾಗುತ್ತಿದೆ. ಗಾಯಗೊಂಡಿರುವ ನನ್ನ ಗಂಡನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಹಾಯ ಮಾಡಿ” ಎಂದು ಕೇಳಿಕೊಂಡಿದ್ದಾರೆ.

Comments (0)
Add Comment