ಚಿತ್ರದುರ್ಗ : ಅರೆಸ್ಟ್ ಆದ ಮೂರು ಗಂಟೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ

ಚಿತ್ರದುರ್ಗ : 13 ತಿಂಗಳುಗಳ ಕಾಲ ಜೈಲಿನಲ್ಲಿದ್ದು ಬೇಲ್ ಪಡೆದು ಹೊರಗೆ ಬಂದಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಸೋಮವಾರ ಮತ್ತೆ ಬಂಧಿತರಾಗಿದ್ದರು. ಆದರೆ ಸಿನಿಮೀಯ ರೀತಿಯಲ್ಲಿ ನಡೆದ ಘಟನೆಯಲ್ಲಿ ಹೈಕೋರ್ಟ್‌ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಶರಣರು ಕಾರಾಗೃಹದಿಂದ ಹೊರಬಂದರು.

ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಮೊದಲ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಷರತ್ತುಬದ್ಧ ಜಾಮೀನಿನಲ್ಲಿ ನ.16ರಂದು ಬಿಡುಗಡೆಯಾಗಿದ್ದ ಶಿವಮೂರ್ತಿ ಶರಣರು ನಾಲ್ಕೇ ದಿನಗಳಲ್ಲಿ ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿದ್ದರು. ಶರಣರ ಬಂಧನಕ್ಕೆ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ ವಾರೆಂಟ್‌, ಬಂಧನ ಹಾಗೂ ಬಿಡುಗಡೆಯ ಬೆಳವಣಿಗೆಗಳು ಇಡೀ ದಿನ ಸಿನೀಮಿಯ ರೀತಿಯಲ್ಲಿ ನಡೆದವು. ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿಕೆ ಕೋಮಲಾ ಅವರು ಇಂದು ಬೆಳಗ್ಗೆ ಮುರುಘಾ ಶ್ರೀಗಳ ವಿರುದ್ಧದ ಎರಡನೇ ಪೋಕ್ಸೊ ಪ್ರಕರಣದಲ್ಲಿ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ಮೊದಲ ಪೋಕ್ಸೋ ಪ್ರಕರಣದಲ್ಲಿ 5 ದಿನಗಳ ಹಿಂದೆ ಹೈಕೋರ್ಟ್ ನಿಂದ ಜಾಮೀನು ಪಡೆದು ದಾವಣಗೆರೆಯ ವಿರಕ್ತ ಮಠದಲ್ಲಿ ತಂಗಿದ್ದ ಮುರುಘಾ ಶ್ರೀಗಳನ್ನು ಬಂಧಿಸಿದ್ದ ಪೊಲೀಸರು ಚಿತ್ರದುರ್ಗಕ್ಕೆ ಕರೆತಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿತ್ತು.

ಇದನ್ನು ಪ್ರಶ್ನಿಸಿ ಮುರುಘಾ ಶ್ರೀಗಳ ಪರ ವಕೀಲರು ಸಂಜೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠದ ಮುಂದೆ ವಾದಿಸಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ವಿಚಾರಣಾ ಕೋರ್ಟ್‌ಗೆ ಮುರುಘಾ ಶ್ರೀಗಳ ವಿರುದ್ಧ ಎನ್‌ಬಿಡಬ್ಲ್ಯೂ ಕೋರಿ ಮೆಮೊ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸೆಷನ್ಸ್‌ ಕೋರ್ಟ್‌ ಹೊರಡಿಸಿದ ವಾರೆಂಟ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌, ತಕ್ಷಣ ಬಿಡುಗಡೆಗೆ ಆದೇಶಿಸಿದ ಪ್ರತಿ ತಲುಪಿದ ಬಳಿಕ ಶರಣರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

Comments (0)
Add Comment