‘ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ’-ವಿಜಯೇಂದ್ರ ಆಗ್ರಹ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಚುನಾವಣಾ ರಾಜಕಾರಣವನ್ನು ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಬೇಕು. ತಕ್ಷಣ ಪರಿಹಾರ ಘೋಷಿಸಿ, ರೈತರಿಗೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ಇಂದು ದಾವಣಗೆರೆ ತಾಲ್ಲೂಕಿನ ಆನಗೋಡು ಮತ್ತು ಅಣಜಿ ಮಧ್ಯದಲ್ಲಿರುವ ಜಮಾಪುರ ಗ್ರಾಮದಲ್ಲ್ಲಿ ಬರಗಾಲ ಪರಿಸ್ಥಿತಿಯನ್ನು ವೀಕ್ಷಿಸಿದರು. ಅಲ್ಲದೆ, ರೈತರಿಗೆ ಧೈರ್ಯ ಹೇಳಿದರು. ಮರುಳಸಿದ್ದಪ್ಪ ಅವರು ಬೆಳೆದ ಮೆಕ್ಕೆ ಜೋಳ ಸಂಪೂರ್ಣವಾಗಿ ನಾಶವಾಗಿದೆ. ಎಕರೆಗೆ 25ರಿಂದ 30 ಸಾವಿರ ಖರ್ಚು ಮಾಡಿದ್ದಾರೆ. ಮರುಳಸಿದ್ದಪ್ಪ ಮಾತ್ರವಲ್ಲದೆ, ಅವರ ಕುಟುಂಬಸ್ಥರಾದ ಸಿದ್ದಮ್ಮನ ಕಣ್ಣಲ್ಲೂ ನೀರನ್ನು ನೋಡಿದ್ದೀರಿ. ರೈತರ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರಕಾರ ಎಚ್ಚತ್ತುಕೊಂಡು ರೈತರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರಕಾರವು ಬರಗಾಲ ಪರಿಹಾರ ಮೊತ್ತವನ್ನು ಘೋಷಣೆ ಮಾಡಿದರೆ ಸಾಲದು. ಅದು ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳಂತೆ ಡಿಬಿಟಿ (ನೇರ ಸೌಲಭ್ಯ ವರ್ಗಾವಣೆ) ಮೂಲಕ ತಕ್ಷಣವೇ ರೈತರನ್ನು ತಲುಪುವಂತಾಗಬೇಕು ಎಂದು ತಿಳಿಸಿದರು.

ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಜೀ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ಡಿಬಿಟಿ ಮೂಲಕ ಕೋಟ್ಯಂತರ ರೈತರಿಗೆ 6 ಸಾವಿರ ರೂಪಾಯಿ ಜಮಾ ಮಾಡುತ್ತಾರೆ. ಯಡಿಯೂರಪ್ಪ ಅವರು 4 ಸಾವಿರ ಕೊಡುತ್ತಿದ್ದರು. ಆದರೆ, ಅದನ್ನು ಸಿದ್ದರಾಮಯ್ಯ ಸರಕಾರ ಬಂದ್ ಮಾಡಿದೆ ಎಂದು ಆಕ್ಷೇಪಿಸಿದರು.

ಕೇಂದ್ರ ಸರಕಾರದ ಯೋಜನೆಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಡವರ ಖಾತೆಗೆ ತಲುಪುತ್ತಿದೆ. ರಾಜ್ಯ ಸರಕಾರ ಜಾಹೀರಾತು ಕೊಟ್ಟು ಪ್ರಚಾರ ಪಡೆಯುವ ಬದಲಾಗಿ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಹತಾಶ ಮನೋಭಾವದಲ್ಲಿದೆ. ಇವತ್ತು ಪ್ರತಾಪ್ ಸಿಂಹ ಅವರ ತಮ್ಮನ ವಿಚಾರದಲ್ಲಿ ಇದೊಂದು ರಾಜಕೀಯ ಪ್ರೇರಿತ ಕ್ರಮವೆಂದು ಎಂಥ ಅನಕ್ಷರಸ್ಥರೂ ಹೇಳುತ್ತಾರೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶವನ್ನು ನೀವೆಲ್ಲ ಗಮನಿಸಿದ್ದೀರಿ. ಕಾಂಗ್ರೆಸ್ ಸರಕಾರವು ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಅವರು ವಿಕ್ರಂ ಸಿಂಹ ಅವರ ಬಂಧನ ಕುರಿತ ಪ್ರಶ್ನೆಗೆ ಉತ್ತರಿಸಿದರು.

Comments (0)
Add Comment