ಚುನಾವಣೆಗೆ ಮುನ್ನ ಗ್ಯಾರಂಟಿ ಘೋಷಿಸುವಾಗ ʼನನ್ನ ತೆರಿಗೆ ನನ್ನ ಹಕ್ಕುʼ ನೆನಪಿರಲಿಲ್ಲವೇ? : ನಿರ್ಮಲಾ ಸೀತಾರಾಮನ್ ಬಹಿರಂಗ ಚರ್ಚೆ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕೇಂದ್ರ ವಿತ್ತ ಸಚಿವೆ

ಬೆಂಗಳೂರು : ʼನನ್ನ ತೆರಿಗೆ ನನ್ನ ಹಕ್ಕುʼ ಘೋಷಣೆ ಸರಿ ಇದೆ. ಎಲ್ಲ ಬೆಂಗಳೂರಿಗರು ಇದೇ ಪ್ರಶ್ನೆ ಕೇಳುತ್ತಾರೆಯೇ? ಚುನಾವಣೆಗೆ ಮುನ್ನ ಗ್ಯಾರಂಟಿ ಘೋಷಿಸುವ ಮುನ್ನ ಈ ಮಾತು ನೆನಪಿರಲಿಲ್ಲವೇ? ಕೊಟ್ಟಿರುವ ಆಶ್ವಾಸನೆ ಪೂರ್ಣ ಗೊಳಿಸಲು ಹಣ ಎಲ್ಲಿಂದ ತರುತ್ತಾರೆ? ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಗ್ಯಾರಂಟಿಗಳಿಗೆ ಹಣ ಬಳಕೆಯಾಗುತ್ತಿರುವುದರಿಂದ ಅಭಿವೃದ್ದಿ ಕೆಲಸಗಳಿಗೆ ಹಣ ಕೊರತೆಯಿದೆ ಎಂದು ಹೇಳಿದ್ದರು. ಕರ್ನಾಟಕದ ಕಲ್ಯಾಣಕ್ಕೆ ಏನು ಮಾಡುತ್ತೀರಿ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದಂತೆ, ಕಳೆದ ಚುನಾವಣೆಯಲ್ಲಿ ಹಿಮಾಚಲದಲ್ಲೂ ಬದಲಾವಣೆಯಾಯಿತು. ಚುನಾವಣೆಗೆ ಮುಂಚೆ ನಾವು ಎನ್ ಪಿ ಎಸ್ ವಿರೋಧಿಸುತ್ತೇವೆ. ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ರಾಜಸ್ಥಾನದಲ್ಲೂ ಚುನಾವಣೆಗೆ ಮುಂಚೆ ಅಶೋಕ್ ಗೆಹ್ಲೋಟ್, ನಾವು ಎನ್ ಪಿ ಎಸ್ ನಲ್ಲಿ ಕೊಟ್ಟಿರುವ ಹಣ ವಾಪಸ್ ಕೊಡಿ, ಒಪಿಎಸ್ ಜಾರಿಗೊಳಿಸಿಯೇ ಸಿದ್ಧ ಎಂದಿದ್ದರು. ಹಿಮಾಚಲದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಂತು. ಈಗ ಎಲ್ಲಿದೆ ಒಪಿಎಸ್? ಜಾರಿಗೆಯಾಯಿತೇ? ಏಕೆ ಈ ಬಗ್ಗೆ ಈಗ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

“ತೆರಿಗೆಯ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಿಮಗೆ ಆಹ್ವಾನವಿದೆಯಲ್ಲಾ?” ಎಂಬ ಪ್ರಶ್ನೆಗೆ ಉತ್ತರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿದರು. 2014ಕ್ಕೂ ಮುಂಚೆ ಭಾರತಕ್ಕೆ ಎಷ್ಟು ಸಾಲವಿತ್ತು, ಈಗ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವೆ, “ಈ ಬಗ್ಗೆ ನನ್ನಲ್ಲಿ ಸರಿಯಾದ ಅಂಕಿ ಅಂಶಗಳಿಲ್ಲ. ಆದರೂ ಹೇಳುತ್ತೇನೆ, ನಮಗೆ ಕೋವಿಡ್‌ ಸಮಯದಲ್ಲಿ ಬಹಳಷ್ಟು ಹಣ ಬೇಕಾಗಿತ್ತು. ಅದಕ್ಕಾಗಿ ಸಾಲ ಪಡೆದಿದ್ದೇವೆ. ಅದನ್ನು ಪಾವತಿಯೂ ಮಾಡುತ್ತಿದ್ದೇವೆ. ಅಭಿವೃದ್ದಿ ಹೊಂದಿರುವ ದೇಶಗಳಿಗೆ ಹೋಲಿಸಿದರೆ ನಾವು ಕಡಿಮೆ ಸಾಲದಲ್ಲಿದ್ದೇವೆ” ಎಂದರು.

ಕಾಂಗ್ರೆಸ್‌ ನೇತೃತ್ವದ ಕೇಂದ್ರದಲ್ಲಿ ಬಂದರೆ ಸಾಂವಿಧಾನಿಕ ಸ್ವತಂತ್ರ ಸಂಸ್ಥೆಗಳ ದುರ್ಬಳಕೆ ತಡೆಯುತ್ತೇವೆ ಎನ್ನುತ್ತಿದ್ದಾರೆ. ವಿಶೇಷವೆಂದರೆ ಅವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಮೊದಲು ಅವರು ಆರೋಪ ರಹಿತವಾಗಿ ಹೊರಬರಲಿ. ಆ ಮೇಲೆ ಸಾಂವಿಧಾನಿಕ ಸ್ವತಂತ್ರ ಸಂಸ್ಥೆಗ ಬಗ್ಗೆ ಮಾತನಾಡಲಿ ಎಂದರು. ತಮಿಳುನಾಡಿನಿಂದ ಬಿಜೆಪಿ ಮತ್ತು ಎನ್‌ ಡಿ ಎ ಯನ್ನು ಓಡಿಸುತ್ತೇವೆ ಎಂದು ಹೇಳಿರುವ ಸಿಎಂ ಸ್ಟಾಲಿನ್‌ ಅವರ ಪಕ್ಷಕ್ಕೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯಿದ್ದರೆ ಈ ರೀತಿಯ ಕಟು ಪದಗಳನ್ನು ಬಳಸುತ್ತಿರಲಿಲ್ಲ. ಇದು ಜವಾಬ್ದಾರಿಯುತ ಮಾತುಗಳಲ್ಲ. ಯಾರನ್ನೂ ಯಾರೂ ಓಡಿಸಲು ಸಾಧ್ಯವಿಲ್ಲ. ಜನರೇ ಅದನ್ನು ತೀರ್ಮಾನ ಮಾಡುತ್ತಾರೆ ಎಂದರು.

Comments (0)
Add Comment