ಜಮೀರ್ ಅಹಮ್ಮದ್‍ಗೆ ಸಿಎಂ ಬುದ್ಧಿಮಾತು ಹೇಳಲಿ-ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

ಬೆಂಗಳೂರು: ಸಂವಿಧಾನಕ್ಕೆ ಅಗೌರವ ನೀಡುವಂಥ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮ್ಮದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದು ಬುದ್ಧಿಮಾತು ಹೇಳಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಸಚಿವ ಜಮೀರ್ ಅಹಮ್ಮದ್ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ ಸ್ಪೀಕರ್ ಸ್ಥಾನ ಬಹಳ ದೊಡ್ಡದು ಮತ್ತು ಗೌರವಯುತವಾದುದು ಎಂದು ನುಡಿದರು.

ವ್ಯಕ್ತಿಗತವಾಗಿ ಆ ಪೀಠದಲ್ಲಿ ಯು.ಟಿ.ಖಾದರ್ ಕುಳಿತುಕೊಳ್ಳುತ್ತಾರೋ ಅಥವಾ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ನಡೆಯುತ್ತದೆ. ಬಿಜೆಪಿ ಶಾಸಕರು, ಮುಖಂಡರು ಕೈಮುಗಿದು ತಲೆಬಾಗಿ ನಮಸ್ಕರಿಸುತ್ತಾರೆ ಎಂಬ ಮಾದರಿಯಲ್ಲಿ ಸಚಿವರು ಹೇಳಿದ್ದು, ಅದು ಸ್ಪೀಕರ್ ಸ್ಥಾನಕ್ಕೆ ಕೊಡುವ ಗೌರವ ಎಂದು ವಿಶ್ಲೇಷಿಸಿದರು.
ಅದನ್ನು ಅವರು ಗಮನದಲ್ಲಿ ಇಟ್ಟುಕೊಂಡಿಲ್ಲ ಎಂದು ಟೀಕಿಸಿದರು.
ಸಂವಿಧಾನಬದ್ಧವಾಗಿ ಕಾಯಾ, ವಾಚಾ, ಮನಸಾ, ರಾಗದ್ವೇಷವಿಲ್ಲದೆ ಕೆಲಸ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹಮ್ಮದ್ ಅವರು, ಬಿಜೆಪಿ ಎಲ್ಲ ಶಾಸಕರು ತಲೆಬಾಗುತ್ತಾರೆ ಎಂದು ಹೇಳಿದ್ದು ದುರದೃಷ್ಟಕರ ಎಂದು ತಿಳಿಸಿದರು.

ಅದು ಸಂವಿಧಾನಿಕ ಪೀಠಕ್ಕೆ ಕೊಡುವ ಗೌರವ. ಬಿಜೆಪಿ ಶಾಸಕರು ಸಂವಿಧಾನಬದ್ಧ ಪೀಠಕ್ಕೆ ಗೌರವ ಕೊಡುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನಕ್ಕೆ ಅಗೌರವ ತರುವಂತೆ ಜಮೀರ್ ಅಹಮ್ಮದ್ ಅವರು ಮಾತನಾಡಿದ್ದನ್ನು, ಯಾವಾಗಲೂ ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದಾಗಿ ಮತ್ತು ಗೌರವಿಸುವವ ಎನ್ನುವ ಸಿದ್ದರಾಮಯ್ಯನವರು ಹೇಗೆ ಪರಿಗಣಿಸಿದ್ದಾರೆ ಎಂದು ಪ್ರಶ್ನಿಸಿದರು.
ಇಂಥ ಅವಾಂತರದ ಮಾತುಗಳು, ಸಂವಿಧಾನಕ್ಕೆ ವಿರುದ್ಧವಾಗಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತರುವುದನ್ನು ಗಮನಿಸಿ ಎಂದು ಅವರು ಆಗ್ರಹಿಸಿದರು.
ಪೀಠಕ್ಕೆ ಕೊಟ್ಟ ಗೌರವವನ್ನು ಚುನಾವಣೆ ಸಂದರ್ಭದಲ್ಲಿ ಬಳಸಿ ಬಾಲಿಶವಾಗಿ ಮಾತನಾಡಿ ಅಪಮಾನ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ತೆಲಂಗಾಣದಲ್ಲಿ ಚುನಾವಣಾ ಭಾಷಣದ ವೇಳೆ ಸಚಿವ ಜಮೀರ್ ಅಹಮದ್, ಮುಸ್ಲಿಂ ಸ್ಪೀಕರ್ ಯುಟಿ ಖಾದರ್‌ಗೆ ಈಗ ಬಿಜೆಪಿಯವರೂ ನಮಸ್ಕರಿಸುತ್ತಾರೆ ಎನ್ನುವ ಮೂಲಕ ವಿವಾದತ್ಮಕ ಹೇಳಿಕೆ ನೀಡಿದ್ದರು.

Comments (0)
Add Comment