ಜ.13 ಕ್ಕೆ KCET ಪರೀಕ್ಷೆ – ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ

ಬೆಂಗಳೂರು: KCET ಪರೀಕ್ಷೆಯು ಜ 13 ಕ್ಕೆ ನಡೆಯಲಿದ್ದು ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು http://kea.kar.nic.in ಜಾಲತಾಣದಲ್ಲಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾಹಿತಿ ನೀಡಿರುವ ಅವರು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ, ಸರ್ಕಾರದಿಂದ ಮಾನ್ಯವಾಗಿರುವ ನಿಗದಿತ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ. ಜೊತೆಗೆ ಪ್ರವೇಶಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಅಲ್ಲದೇ ಇತ್ತೀಚಿನ ಎರಡು ಭಾವಚಿತ್ರಗಳನ್ನು ತರಬೇಕು ಎಂದು ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರವು ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ, ಅಭ್ಯರ್ಥಿಗಳು ಯಾವುದೇ ಆಭರಣ, ಕಿವಿಯೋಲೆ, ಉಂಗುರ ಮತ್ತು ಕಡಗಗಳನ್ನು ಧರಿಸಿಕೊಂಡು ಬರಬಾರದು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಿರಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬ್ಲೂಟೂತ್, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ವಸ್ತುಗಳು, ಇಯರ್ ಫೋನ್, ಕೈ ಗಡಿಯಾರ, ಮೈಕ್ರೋಫೋನ್, ಪೆನ್ಸಿಲ್, ಎರೇಸರ್, ಜಾಮೆಟ್ರಿ ಪೆಟ್ಟಿಗೆ ಮತ್ತು ಲಾಗ್ ಟೇಬಲ್ ಇತ್ಯಾದಿಗಳನ್ನು ತರುವಂತಿಲ್ಲ ಎಂದು ಸೂಚನೆ ನೀಡಿದೆ.

Comments (0)
Add Comment