ಟೆಲಿ ಐಸಿಯು ಹಬ್‌ಗೆ ರಾಜ್ಯದ 41 ಆಸ್ಪತ್ರೆ ಜೋಡಣೆ: ದಿನೇಶ್‌ ಗುಂಡೂರಾವ್‌

ಹುಬ್ಬಳ್ಳಿ: ರಾಜ್ಯಾದ್ಯಂತ ಅಪ್ಪು ಹೃದಯ ಜ್ಯೋತಿ ಯೋಜನೆಯಡಿ ಮುಂದಿನ ತಿಂಗಳು ಟೆಲಿ ಇಸಿಜಿ ಹಬ್‌ಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಜನರ ಆರೋಗ್ಯ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ.

ಗ್ರಾಮ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿನ ಐಸಿಯುಗಳು ಇದ್ದರೂ ತಜ್ಞ ವೈದ್ಯರು ಇಲ್ಲದ ಕಾರಣ ಸರಿಯಾಗಿ ಬಳಕೆ ಆಗುತ್ತಿಲ್ಲ. ಈ ಟೆಲಿ ಐಸಿಯು ಹಬ್‌ನಿಂದ ಅವುಗಳ ಬಳಕೆ ಮಾಡಿಕೊಳ್ಳುವುದರ ಜತೆಗೆ ತಂತ್ರಜ್ಞಾನದ ಮೂಲಕ ತಜ್ಞವೈದ್ಯರು ನೇರ ಸಂಭಾಷಣೆ ನಡೆಸಿ ಅಲ್ಲಿನ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸಾ ಸಲಹೆ ದೊರೆಯುತ್ತದೆ. ಇದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳ ಮೇಲಾಗುವ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಟೆಲಿ ಐಸಿಯು ಹಬ್‌ಗೆ ರಾಜ್ಯದ 41 ಆಸ್ಪತ್ರೆಗಳನ್ನು ಸೇರಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಜೋಡಿಸುವ ಚಿಂತನೆಯಿದೆ. ಇನ್ನು ಮುಂದಿನ ತಿಂಗಳಲ್ಲಿ ಪುನೀತ್‌ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಪ್ರಾರಂಭಿಸಲಾಗುತ್ತದೆ. ಪ್ರಥಮ ಹಂತದಲ್ಲಿ 48 ಆಸ್ಪತ್ರೆಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಇದರೊಂದಿಗೆ ಡಯಾಲಿಸಿಸ್‌ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಭರವಸೆ ನೀಡಿದರು

Comments (0)
Add Comment