ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರಗೊಂಡ ಸ್ಥಳ ಪುಣ್ಯಭೂಮಿ ಆಗಬೇಕೆಂಬ ಬೇಡಿಕೆ : ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯ

ಕನ್ನಡದ ಅದ್ಭುತ ಕಲಾವಿದ ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರಗೊಂಡ ಸ್ಥಳ ಪುಣ್ಯಭೂಮಿ ಆಗಬೇಕೆಂಬ ವಿಷ್ಣು ಅಭಿಮಾನಿಗಳ ಬೇಡಿಕೆ ಇದ್ದು ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ವೆಚ್ಚದಲ್ಲಿ ವಿಷ್ಣುವರ್ಧನ್ ಅವರ ಇತಿಹಾಸ ಸಾರುವ ಸ್ಮಾರಕ ಲೋಕಾರ್ಪಣೆಗೊಳಿಸಿದ್ದನ್ನು ಗೌರವ ಪೂರ್ವಕವಾಗಿ ಸ್ಮರಿಸಿರುವ ವಿಜಯೇಂದ್ರ, ಕೂಡಲೇ ಸರಕಾರ ಮಧ್ಯ ಪ್ರವೇಶಿಸಿ ಪುಣ್ಯಭೂಮಿಯ ಜಾಗವನ್ನು ಅಭಿಮಾನಿಗಳಿಗೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪುಣ್ಯಭೂಮಿ ಕುರಿತಾದ ಹೋರಾಟ ಡಿ 17 ರ ಬೆಳಗಿನಿಂದಲೇ ಆರಂಭವಾಗಿದ್ದು. ರಾಜ್ಯದ ಮೂಲೆ ಮೂಲೆಗಳಿಂದ ವಿಷ್ಣು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದರು. ಜೊತೆಗೆ 42ಕ್ಕೂ ಹೆಚ್ಚು ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದವು. ಈ ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ್, ವಸಿಷ್ಠ ಸಿಂಹ, ನೀನಾಸಂ ಸತೀಶ್ ಸೇರಿದಂತೆ ಹಲವು ನಟರು ಮತ್ತು ನಟಿಯರು ಹಾಗೂ ತಂತ್ರಜ್ಞರು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಷಯವಾಗಿ ಮಾಹಿತಿಯನ್ನು ತಿಳಿಸಲು ಸುದೀಪ್ ಅವರು ಡಿ.ಕೆ ಶಿವಕುಮಾರ್ ಭೇಟಿ ಆಗಲಿದ್ದಾರೆ ಎನ್ನಲಾಗುತ್ತಿದೆ.

Comments (0)
Add Comment