ಡಿಕೆಶಿ ಮೇಲಿನ ಕೇಸ್ ವಾಪಸ್‌ಗೆ ಸಂಪುಟ ಅಸ್ತು..!

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಅಚ್ಚರಿಯ ನಿರ್ಧಾರ ಹೊರಬಿದ್ದಿದೆ. ಇದರಿಂದ ಡಿ.ಕೆ.ಶಿವಕುಮಾರ್ ಅವರು ಸದ್ಯಕ್ಕೆ ನಿರಾಳರಾದಂತೆ ಕಂಡು ಬಂದಿದ್ದು, ಸರ್ಕಾರದ ಈ ನಡೆ ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ. ಡಿ.ಕೆ.ಶಿವಕುಮಾರ್ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದು, ಕಾನೂನು ಕಣ್ಣಿಗೆ ಮಣ್ಣೆರಚಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಡಿಕೆಶಿ ಅವರಿಗೆ ಸೇರಿದ ಬೆಂಗಳೂರು, ದೆಹಲಿ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಇದಾದ ಬಳಿಕ 2019ರಲ್ಲಿ ಆಪರೇಷನ್ ಕಮಲದ ಮೂಲಕ ಮತ್ತೆ ಸಿಎಂ ಆಗಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ, ಅಂದು ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಸಾಗಿ ಬಂದಿದ್ದ ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವು ಶೇ.90 ರಷ್ಟು ಪೂರ್ಣಗೊಂಡಿತ್ತು, ಇನ್ನೇನು ಚಾರ್ಜ್ ಶೀಟ್ ದಾಖಲಿಸುವ ಹಂತದಲ್ಲಿದ್ದಾಗ ಡಿಕೆಶಿ ಮೇಲಿನ ಈ ಪ್ರಕರಣವನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿರೋದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಆದರೆ, ಇದಕ್ಕೆ ಸರ್ಕಾರ ಕೊಡುವ ಕಾರಣಗಳು ಹೀಗಿವೆ. 1.ಅಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಡಿನ ರಾಜಕೀಯ ಮಾಡಿ ಡಿಕೆಶಿ ಮೇಲೆ ಸಿಬಿಐ ತನಿಖೆಗೆ ಆದೇಶಿಸಿತ್ತು. 2. ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವಾಗ ಕಾನೂನು ಪ್ರಕಾರ ಸ್ಪೀಕರ್ ಅವರ ಅನುಮತಿ ಪಡೆಯಬೇಕು. ಆದರೆ, ಅಂದಿನ ಬಿಜೆಪಿ ಸರ್ಕಾರ ಸ್ಪೀಕರ್ ಅನುಮತಿ ಪಡೆದಿರಲಿಲ್ಲ. 3. ಈ ಎಲ್ಲ ನ್ಯೂನತೆಗಳನ್ನು ಪುನರ್ ಪರಾಮರ್ಶಿಸಿದ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಡಿಕೆಶಿ ಮೇಲಿನ ಸಿಬಿಐ ಪ್ರಕರಣವನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಸಚಿವ ಹಚ್.ಕೆ.ಪಾಟೀಲ್ ಅವರು ವಿವರಿಸಿದರು. ಡಿಕೆಶಿ ಮೇಲಿನ ಸಿಬಿಐ ಪ್ರಕರಣವನ್ನು ಸರ್ಕಾರ ವಾಪಸ್ ತೆಗೆದುಕೊಳ್ಳುತ್ತಿರೋದೊಂದು ಕೆಟ್ಟ ಸಂಪ್ರದಾಯ. ಏಕೆಂದರೆ, ಕೇಸ್ ಇನ್ನೂ ಕೋರ್ಟ್ ನ ವಿಚಾರಣೆಯಲ್ಲಿರುವಾಗ, ಕಾಂಗ್ರೆಸ್ ಸರ್ಕಾರ ಆರೋಪಿಯ ರಕ್ಷಣೆಗೆ ನಿಂತಂತಿದೆ ಅಂತಾ ಮತ್ತೊಂದೆಡೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

Comments (0)
Add Comment