ಡಿಡಿಪಿಐ 10 ಸಾವಿರ ಲಂಚ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದವರು.!

 

ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ₹4 ಸಾವಿರ ಪಡೆಯುವಾಗ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ ಮತ್ತು ದ್ವಿತೀಯ ದರ್ಜೆ ಸಹಾಯಕ ಅಸ್ರಾರ್ ಅಹಮ್ಮದ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಶೌಚಾಲಯ ನಿರ್ಮಾಣ ಯೋಜನೆಗೆ ಮೂಡಿಗೆರೆ ತಾಲ್ಲೂಕಿನ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಿಬೈಲು ಮತ್ತು ಕಡೆಮಡ್ಕಲ್ ಗ್ರಾಮದ ಸರ್ಕಾರಿ ಶಾಲೆಗಳು ಆಯ್ಕೆಯಾಗಿದ್ದವು. ಅವುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವುದು ಬಾಕಿ ಇತ್ತು.

ಅನುಮೋದನೆ ಪಡೆಯಲು ಕಚೇರಿಗೆ ಅಲೆದಾಡಿದ್ದ ಗುತ್ತಿಗೆದಾರ ಅಬುಬಕರ್ ಅವರ ಮಗ ಸಲಾವುದ್ದೀನ್ ನೀಡಿದ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಲಂಚದ ಹಣ ಸಮೇತ ಇಬ್ಬರನ್ನು ಬಂಧಿಸಿದ್ದಾರೆ.

‘ಕಚೇರಿಯ ಗುಮಾಸ್ತ ಅಸ್ರಾರ್ ಅಹಮ್ಮದ್ ಅವರಿಗೆ ಪತ್ರ ನೀಡಲು ಉಪನಿರ್ದೇಶಕರು ತಿಳಿಸಿದ್ದರು. ಅದರಂತೆ ಅವರನ್ನು ಸಂಪರ್ಕಿಸಿದಾಗ ಅವರು ಸ್ವೀಕರಿಸಿರಲ್ಲ. ₹1 ಸಾವಿರ ಲಂಚ ನೀಡಿದ ಬಳಿಕ ಸ್ವೀಕೃತಿ ಪತ್ರ ನೀಡಿದರು. ಅನುಮೋದನೆ ನೀಡಲು ₹10 ಸಾವಿರ ಲಂಚ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. ಅದೆಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದೇನೆ’ ಎಂದು ದೂರುದಾರ ತಿಳಿಸಿದ್ದಾರೆ.

Comments (0)
Add Comment