ತೀವ್ರಗೊಂಡ ಇಸ್ರೇಲ್ ವಾಯುದಾಳಿ – ಗಾಜಾದಲ್ಲಿ ಅಲ್‌ ಜಜೀರಾ ಉದ್ಯೋಗಿಯ ಕುಟುಂಬದ 19 ಸದಸ್ಯರ ದುರ್ಮರಣ ಭಾರಿ ಖಂಡನೆ

ಜೇರುಸಲೇಂ : ಹಮಾಸ್ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಲು ಮುಂದಾಗಿರುವ ಇಸ್ರೇಲ್ ಪಡೆ, ಗಾಜಾ ಪಟ್ಟಣದ ಮೇಲೆ ದಾಳಿಯನ್ನು ಮುಂದುವರೆಸಿದೆ. ನೆಲ, ಜಲ ಹಾಗೂ ವಾಯುದಾಳಿಯನ್ನು ಇಸ್ರೇಲ್ ನಡೆಸುತ್ತಿದ್ದು, ಉಗ್ರರೊಂದಿಗೆ ಸಾವಿರಾರು ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ಭಯೋತ್ಪಾದಕರ ನಡುವೆ ನಡೆದಿರುವ ಈ ಯುದ್ಧ 26 ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆ ಬಡಿಯುವವರೆಗೆ ದಾಳಿಗೆ ವಿರಾಮ ಹೇಳುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಇನ್ನು, ನಿನ್ನೆ ಇಸ್ರೇಲ್ ನಡೆಸಿರುವ ಭೀಕರ ವಾಯುದಾಳಿಯಲ್ಲಿ ಅಲ್ ಜಜೀರಾ ಉದ್ಯೋಗಿಯ ಕುಟುಂಬದ 19 ಸದಸ್ಯರು ಬಲಿಯಾಗಿದ್ದು, ಭಾರಿ ಖಂಡನೆ ವ್ಯಕ್ತವಾಗಿದೆ. ಗಾಜಾದ ಜನನಿಬಿಡ ಜಬಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್​ ಪಡೆ ಮಂಗಳವಾರ ನಡೆಸಿದ ವಾಯುದಾಳಿಯಲ್ಲಿ ಅಲ್ ಜಜೀರಾ ಮಾಧ್ಯಮದ ಉದ್ಯೋಗಿಯು ತನ್ನ 19 ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದು, ಈ ದಾಳಿಯನ್ನು ಅಲ್ ಜಜೀರಾ ಕಟುವಾಗಿ ಖಂಡಿಸಿದೆ. ಇದೇ ದಾಳಿಯಲ್ಲಿ ಒಟ್ಟು 50 ಪ್ಯಾಲೆಸ್ತೀನಿಯರು ಮತ್ತು ಓರ್ವ ಹಮಾಸ್​ ಕಮಾಂಡರ್​ ಮೃತಪಟ್ಟಿದ್ದಾನೆ. ದಾಳಿ ನಡೆದ ಒಂದು ದಿನದ ಬಳಿಕ ಅಲ್ ಜಜೀರಾ ಮಾಧ್ಯಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ನಮ್ಮ ಎಸ್​ಎನ್​ಜಿ ಇಂಜಿನಿಯರ್ ಮೊಹಮದ್ ಅಬು ಅಲ್-ಕುಮ್ಸಾನ್ ಅವರ 19 ಕುಟುಂಬ ಸದಸ್ಯರ ಹತ್ಯೆಗೆ ಕಾರಣವಾದ ಹೇಯ ಮತ್ತು ವಿವೇಚನಾರಹಿತ ಇಸ್ರೇಲಿ ಬಾಂಬ್ ದಾಳಿಯನ್ನು ಅಲ್ ಜಜೀರಾ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ.

Comments (0)
Add Comment