ದೇಶದಲ್ಲಿ 573 ಹೊಸ ಕೋವಿಡ್- 19 ಪ್ರಕರಣ ಪತ್ತೆ; ರಾಜ್ಯದಲ್ಲಿ ಒಂದು ಸಾವು

ನವದೆಹಲಿ: ದೇಶದಲ್ಲಿ ಹೊಸದಾಗಿ 573 ಕೋವಿಡ್ – 19 ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,565 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ – 19 ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಪೈಕಿ ಕರ್ನಾಟಕದ ಒಬ್ಬರು ಹಾಗೂ ಹರಿಯಾಣದ ಒಬ್ಬರು ಮೃತಪಟ್ಟಿದ್ದಾರೆ. 2023ರ ಡಿ. 5 ರ ವರೆಗೆ ಕೋವಿಡ್ – 19 ಪ್ರಕರಣಗಳ ಸಂಖ್ಯೆಯು ಏರಿಕೆಯನ್ನು ಕಂಡಿರಲಿಲ್ಲ. ಆದರೆ ಹೊಸ ರೂಪಾಂತರಿ ಜೆಎನ್.1 ಹಾಗೂ ಶೀತ ಹವಾಮಾನದಿಂದ ಸೋಂಕು ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

INSACOG ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಇಲ್ಲಿಯವರೆಗೆ 263 ಕೋವಿಡ್-19 ರೂಪಾಂತರಿ ಜೆಎನ್.1ರ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಜೆಎನ್.1 ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿ ವರದಿಯಾಗಿದೆ ಎಂದು ತಿಳಿಸಿದೆ.

ಇನ್ನು ಈವರೆಗೆ ಕೋವಿಡ್-19 ರೂಪಾಂತರಿ ಜೆಎನ್.1 ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿದೆ. ಕೇರಳದಲ್ಲಿ 133, ಗೋವಾದಲ್ಲಿ 51, ಗುಜರಾತ್ ನಲ್ಲಿ 34, ದೆಹಲಿಯಲ್ಲಿ 16, ಕರ್ನಾಟಕದಲ್ಲಿ 8, ಮಹರಾಷ್ಟ್ರದಲ್ಲಿ 9, ರಾಜಸ್ಥಾನದಲ್ಲಿ 5, ತಮಿಳುನಾಡಿನಲ್ಲಿ 4, ತೆಲಂಗಾಣದಲ್ಲಿ 2, ಒಡಿಶಾದಲ್ಲಿ 1 ಪ್ರಕರಣಗಳು ದಾಖಲಾಗಿವೆ ಎಂದು INSACOG ಮಾಹಿತಿ ನೀಡಿದೆ.

Comments (0)
Add Comment