ದೇಶದ ಅತಿ ಉದ್ದದ ಸಮುದ್ರ ಸೇತುವೆ ಮೇಲೆ ಮೊದಲ ಅಪಘಾತ – ಐವರಿಗೆ ಗಾಯ

ಮುಂಬೈ: ಕಳೆದ ಒಂದು ವಾರದ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ದೇಶದ ಅತೀ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನಲ್ಲಿ  (ಅಟಲ್ ಸೇತು) ಮೊದಲ ಅಪಘಾತ ಸಂಭವಿಸಿದೆ.

ಚಾಲಕನಿಂದ ನಿಯಂತ್ರಣ ಕಳೆದುಕೊಂಡ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡಿದಿದೆ. ಡಿಕ್ಕಿ ಹೊಡೆದು ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳಿಗೆ ಗಾಯಗಳಾಗಿವೆ, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೊಳಗಾದ ಕಾರು ಅವರು ಚಿರ್ಲೆಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

17,840 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಟಲ್‌ ಸೇತು ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರಗಳ ಹಿಂದೆ ಉದ್ಘಾಟಿಸಿದ್ದರು. ಈ ಯೋಜನೆಯು ಸರಿಸುಮಾರು 21 ಕಿ.ಮೀ. ಉದ್ದದ 6 ಲೇನ್‌ (3+3-ಲೇನ್, 2 ತುರ್ತು ಲೇನ್) ಸೇತುವೆಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾವನ್ನು ಸಂಪರ್ಕಿಸುತ್ತದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ, ಮುಂಬೈ-ಗೋವಾ ಎಕ್ಸ್‌ಪ್ರೆಸ್‌ವೇ, ವಿರಾರ್‌-ರಾಯ್‌ಘಡರ್‌ ಕಾರಿಡರ್‌ ಸಂಪರ್ಕ ಇನ್ನು ಮುಂದೆ ಸುಲಭವಾಗಲಿದೆ.

ಈ ರಸ್ತೆಯಲ್ಲಿ 4 ಚಕ್ರದ ವಾಹನಗಳಿಗೆ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಬೈಕ್‌, ಅಟೋರಿಕ್ಷಾ, ಟ್ರ್ಯಾಕ್ಟರ್‌ ಸಂಚಾರವನ್ನು ನಿರ್ಬಂಧಿಸಲಾಗಿದೆ. 1962 ರಲ್ಲೇ ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಜಾರಿ ಸಂಬಂಧ ಹಲವು ಅಧ್ಯಯನಗಳು ನಡೆದಿದ್ದವು. 2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್‌ ಆಹ್ವಾನಿಸಿತ್ತು.

ಈ ಯೋಜನೆಯಲ್ಲಿ ರಾಜಕೀಯದ ಗಾಳಿ ಬೀಸಿ ಭಾರೀ ಟೀಕೆ ಬಂದ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೊನೆಗೆ ಎಲ್ಲಾ ಇಲಾಖೆಗಳ ಅನುಮತಿ ಪಡೆದ ಬಳಿಕ 2016ರ ಡಿಸೆಂಬರ್‌ 24 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಭೂಮಿ ಸ್ವಾಧೀನ ಪಡಿಸಿದ ಬಳಿಕ 2018ರ ಏಪ್ರಿಲ್‌ 24 ರಂದು ಕಾಮಗಾರಿ ಆರಂಭವಾಗಿತ್ತು.

Comments (0)
Add Comment