ನಾಳೆಯಿಂದ ಆಯೋಧ್ಯೆಯಲ್ಲಿ ಪೂಜಾ ವಿಧಿವಿಧಾನ ಆರಂಭ- ಚಂಪತ್ ರೈ

ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಇದೀಗ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಆಯೋಧ್ಯೆ ಸಜ್ಜಾಗುತ್ತಿದೆ. ನಾಳೆಯಿಂದ ಪ್ರಾಣ ಪ್ರತಿಷ್ಠಾಕ್ಕೆ ಸಂಬಂಧಿಸಿದ ಪೂಜಾ ವಿಧಿ-ವಿಧಾನಗಳು ಪ್ರಾರಂಭವಾಗಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ರಾಮನ ವಿಗ್ರಹವು 150 ರಿಂದ 200 ಕೆಜಿ ತೂಕವಿರುತ್ತದೆ. ವಿಗ್ರಹಕ್ಕೆ 5 ವರ್ಷದ ಬಾಲಕನ ರೂಪ ನೀಡಲಾಗಿದೆ. ಮಂಗಳವಾರದಿಂದ ಆರಂಭವಾಗಿ ಜನವರಿ 21ರವರೆಗೆ ಈ ಪೂಜಾ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದರು.
ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ರಾಮಲಲ್ಲಾ ಪ್ರಣಪ್ರತಿಷ್ಠಾ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿದ್ದಾರೆ.ಈ ಕಾರ್ಯಕ್ರಮವು ಸುಮಾರು 65 ರಿಂದ 75 ನಿಮಿಷಗಳವರೆಗೆ ಇರುತ್ತದೆ ಎಂದು ಚಂಪತ್‌ ವಿವರಿಸಿದರು.

Comments (0)
Add Comment