ನೂತನ ಕಾಂಗ್ರೆಸ್​ ರಾಜ್ಯಾಧ್ಯಕ್ಷರಾಗಿ ಒಬಿಸಿ ನಾಯಕ ಜಿತು ಪಟ್ವಾರಿ ನೇಮಕ

ಮಧ್ಯಪ್ರದೇಶ: ಮಧ್ಯಪ್ರದೇಶ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ನೂತನ ಕಾಂಗ್ರೆಸ್​ ರಾಜ್ಯಾಧ್ಯಕ್ಷರಾಗಿ ಒಬಿಸಿ ನಾಯಕ ಜಿತು ಪಟ್ವಾರಿ ನೇಮಕ ಮಾಡಲಾಗಿದೆ.

ಕಮಲ್​ನಾಥ್ ಬದಲಿಗೆ ಜಿತು ಪಟ್ವಾರಿ ಆಯ್ಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಕಮಲ್ ನಾಥ್ ಅವರು ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪಟ್ವಾರಿ ಅವರು ಕಮಲ್ ನಾಥ್ ಸರ್ಕಾರದಲ್ಲಿ ಉನ್ನತ ಶಿಕ್ಷಣ, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದರು. ಅವರು ಮಾಲ್ವಾ-ನಿಮಾರ್ ಪ್ರದೇಶದಿಂದ ಬಂದವರು. ಬುಡಕಟ್ಟು ಜನಾಂಗದ ನಾಯಕ ಉಮೇಶ್ ಸಿಂಘಾರ್ ಅವರನ್ನು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಮಾಡಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ಇದೇ ಪ್ರದೇಶದಿಂದ ಬಂದವರು. ಜಿತು ಪಟ್ವಾರಿ ಕೂಡ ಒಬಿಸಿ ಸಮುದಾಯದಿಂದ ಬಂದವರು ಮತ್ತು ರಾಹುಲ್ ಗಾಂಧಿಗೆ ಆಪ್ತರಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನವೆಂಬರ್ 17ರಂದು ನಡೆದ ಚುನಾವಣೆಯಲ್ಲಿ 163 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿ ಮರಳಿ ಅಧಿಕಾರ ಪಡೆದಿತ್ತು. ಕಾಂಗ್ರೆಸ್ 66 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಕಾಂಗ್ರೆಸ್​ ಮುಖ್ಯಸ್ಥರನ್ನು ಬದಲಾವಣೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments (0)
Add Comment