ನ್ಯೂಯಾರ್ಕ್ ನಗರದಲ್ಲಿ 2 ರೈಲುಗಳ ನಡುವೆ ಅಪಘಾತ – 20ಕ್ಕೂ ಅಧಿಕ ಮಂದಿಗೆ ಗಾಯ

ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಸುರಂಗಮಾರ್ಗದಲ್ಲಿ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದ ರೈಲು ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನ್ಯೂಯಾರ್ಕ್ ನ 96ನೇ ಸ್ಟ್ರೀಟ್ ನಿಲ್ದಾಣದ ಬಳಿ ನಡೆದಿದೆ.

ಜ.4ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುಮಾರು 300 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲು ಮತ್ತು ನಾಲ್ಕು ಕಾರ್ಮಿಕರಿದ್ದ ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ(ಎಂಟಿಎ) ರೈಲಿನ ನಡುವೆ 96ನೇ ಸ್ಟ್ರೀಟ್ ನಿಲ್ದಾಣದ ಬಳಿ ಪರಸ್ಪರ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಿಂದ ರೈಲಿನ ಕನಿಷ್ಠ ಒಂದು ಚಕ್ರವು ಹಳಿ ತಪ್ಪಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಘಟನೆಯ ಕುರಿತು ಮಾಹಿತಿ ನೀಡಿರುವ ನಗರದ ತುರ್ತು ನಿರ್ವಹಣಾ ಅಧಿಕಾರಿಗಳು ‘ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಎರಡು ರೈಲುಗಳ ನಡುವೆ ಡಿಕ್ಕಿ ನಿಜಕ್ಕೂ ಭಯಾನಕ. ಘಟನೆಯ ಪರಿಣಾಮ ರೈಲು ಭಾಗಶಃ ಹಳಿಗಳಿಂದ ಹೊರಬಂದಿದ್ದು, ತಾಂತ್ರಿಕ ವೈಫಲ್ಯದ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ. ಮಾನವ ದೋಷದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನು ನ್ಯೂಯಾರ್ಕ್ ನಗರದ ಸುರಂಗಮಾರ್ಗ ವ್ಯವಸ್ಥೆಯು ಬಹಳ ಹಳೆಯದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಕಡಿತ, ಸಿಗ್ನಲ್ ಸಮಸ್ಯೆಗಳು ಮತ್ತು ಇತರ ಸಮಸ್ಯೆಗಳು ತಲೆದೋರುತ್ತಿದ್ದು, ಈ ಅವಘಡಕ್ಕೆ ಇದೇ ಪ್ರಮುಖ ಕಾರಣವೇ ಎಂದು ಶಂಕೆ ವ್ಯಕ್ತವಾಗುತ್ತಿದೆ.

Comments (0)
Add Comment