ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ – ಹದಿನೈದು ವರ್ಷ ಕಾಲ ಸಹಿಸಿದ ಹಿಂಸೆಗೆ ಮುಕ್ತಿ ದೊರೆತಿದೆ – ಮಾಜಿ ಶಾಸಕ ರಘುಪತಿ ಭಟ್

ಉಡುಪಿ : ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಠಿಸಿದ ಆರೋಪದ ಮೇಲೆ ಅತುಲ್ ರಾವ್ ಅವರಿಗೆ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಈ ಕುರಿತಂತೆ ಪದ್ಮಪ್ರಿಯ ಅವರ ಪತಿ ಮಾಜಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, 15 ವರ್ಷಗಳ ಕಾಲ ಸಹಿಸಿದ ಹಿಂಸೆ ಮುಕ್ತಿ ದೊರೆತಿದೆ ಎಂದಿದ್ದಾರೆ.

ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಘುಪತಿ ಭಟ್ , ಮರಳುಗಾಡಿನಲ್ಲಿ ಉಕ್ಕಿತು ನೀರಿನ ಝರಿ, ನನ್ನ ಪೊರೆದವರಿಗೆಲ್ಲ ನಮೋ ನಮ, ಹದಿನೈದು ವರ್ಷ ಕಾಲ ಸಹಿಸಿದ ಹಿಂಸೆಗೆ ಮುಕ್ತಿ ದೊರೆತಿದೆ. ಉಡುಪಿ ನ್ಯಾಯಾಲಯ ನನ್ನ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿರುವ ಈ ದಿನ ನನಗೆ ಅತ್ಯಂತ ಸಂತೋಷದ ದಿನ. ನಾನು ಜನ ಪ್ರತಿನಿಧಿಯಾಗಿ ಜನರ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಈ ಆಘಾತ ನಡೆದಿತ್ತು. ವೈಯಕ್ತಿಕ ಬದುಕಿನ ಈ ನೋವನ್ನು ಆಂತರ್ಯದಲ್ಲಿರಿಸಿಕೊಂಡಿದ್ದೆ. ನನ್ನ ರಾಜಕೀಯ ಬದುಕನ್ನು ಮುಗಿಸಲು ಮಾಡಿದ ಷಡ್ಯಂತ್ರ, ಜೀವದ ಗೆಳೆಯರಾಗಿದ್ದವರೇ ಮಾಡಿದ ವಂಚನೆಯನ್ನು ನ್ಯಾಯಾಲಯ ಗಮನಿಸಿ ತೀರ್ಪು ನೀಡಿದೆ. ನ್ಯಾಯಾಲಯ ನನಗೆ ನ್ಯಾಯ‌ಒದಗಿಸಿದೆ.

ಇದು‌ ನನ್ನ ಬದುಕಿನಲ್ಲಿ ಹೊಸ ಚೈತನ್ಯ ತುಂಬಿದೆ. ಹೊಸ ಅದ್ಯಾಯ ಆರಂಭಗೊಳ್ಳುತ್ತದೆ. ಕಷ್ಟ ಕಾಲದಲ್ಲಿ ಬೆನ್ನಿಗೆ ನಿಂತ ಹಿತೈಷಿಗಳು, ಬಂಧು ಮಿತ್ರರ ಋಣ ಅಪಾರ. ಕೃತಜ್ಞ ನಾನವರಿಗೆ ನಿರಂತರ ಎಂದು ಬರೆದಿದ್ದಾರೆ.

2008ರಲ್ಲಿ ಜೂನ್ 10ರಂದು ಪದಪ್ರಿಯ ಅವರು ಮನೆಯಿಂದ ನಾಪತ್ತೆಯಾಗಿದ್ದು, ನಂತರ ದೆಹಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಅವರನ್ನು ಉಡುಪಿಯಿಂದ ದೆಹಲಿಗೆ ಕರೆದುಕೊಂಡು ಹೋಗಿದ್ದ ರಘುಪತಿ ಭಟ್ಟ ಅವರ ಬಾಲ್ಯದ ಗಳೆಯ ಅತುಲ್ ರಾವ್ ಅವರ ಮೇಲೆ ಅಪಹರಣ, ಆತ್ಮಹತ್ಯೆ ಪ್ರಚೋದನೆಯ ದೂರು ನೀಡಿದ್ದರು. ನಂತರದ ಚುನಾವಣೆಯಲ್ಲಿ ರಘುಪತಿ ಭಟ್ಟರಿಗೆ ಪಕ್ಷ ಟಿಕೇಟ್ ನೀಡದಿರುವಂತಹ ಬಾರೀ ಸಂಚಲನಕ್ಕೆ ಕಾರಣವಾಗಿದ್ದ ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸಲಾಗಿತ್ತು. ಆದರೆ ತನಿಖೆಯಲ್ಲಿ ಅಪಹರಣ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸಾಬೀತಾಗದೇ ಅತುಲ್ ಅವರ ಮೇಲಿನ ಆರೋಪವನ್ನು ಸಿಓಡಿ ಕೈಬಿಟ್ಟಿತ್ತು.

Comments (0)
Add Comment