ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರನ ಬರ್ತ್‌ಡೇ ಸೆಲೆಬ್ರೇಶನ್

ಬೆಂಗಳೂರು: ಕೆಲವು ಖೈದಿಗಳು ಸೆಂಟ್ರಲ್‌ ಜೈಲನ್ನೇ ತಮ್ಮ ಅರಮನೆ ಮಾಡಿಕೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಇನ್ನೊಂದು ಸಾಕ್ಷ್ಯ ದೊರೆತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರನೊಬ್ಬ ಭರ್ಜರಿ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾನೆ.

ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವ ಉಮೇಶ್‌, ಕಳೆದ ತಿಂಗಳು ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾನೆ. ಮಾತ್ರವಲ್ಲ ಜೈಲು ಅಧಿಕಾರಿಗಳು ಬರ್ತ್‌ಡೇಗೆ ಜೈಲನ್ನೇ ಫೈವ್‌ಸ್ಟಾರ್ ಹೋಟೆಲ್ ರೀತಿಯಲ್ಲಿ ವೇದಿಕೆ ಸಜ್ಜು ಮಾಡಿ ಕೊಟ್ಟಿದ್ದಾರೆ ಎಂಬ ಆರೋಪವೂ ಇದೆ.

ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಡರ್ ಕೇಸ್‌ನಲ್ಲಿ ಉಮೇಶ್‌ ಜೈಲು ಸೇರಿದ್ದ. ಆನಂದ್ ಎಂಬವನನ್ನು ಕೊಲೆ ಮಾಡಿ ಹಂತಕ ಉಮೇಶ್ ಜೈಲಿಗೆ ಹೋಗಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲೇ ಬೆಂಬಲಿಗರೊಂದಿಗೆ ಕೇಕ್ ಕಟ್ ಮಾಡಿ ಸೆಲಬ್ರೆಷನ್ ಮಾಡಿಕೊಂಡಿದ್ದಾನೆ. ಒಳಗಡೆ ಅಷ್ಟೇ ಅಲ್ಲದೇ ಸೆಂಟ್ರಲ್ ಜೈಲ್ ಮುಂದೆಯೂ ಆತನ ಬೆಂಬಲಿಗರು ಬರ್ತ್‌ಡೇ ಸೆಲಬ್ರೇಟ್ ಮಾಡಿದ್ದಾರೆ.

ಜೈಲು ಅಧಿಕಾರಿಗಳ ಸಹಾಯ ಇಲ್ಲದೇ ಖೈದಿಯ ಭರ್ಜರಿ ಬರ್ತ್‌ಡೇ ಆಚರಣೆ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಇಷ್ಟೆಲ್ಲ ಬೆಳವಣಿಗೆ ಆದರೂ ಕೂಡ ಜೈಲಿನ ಮೇಲಧಿಕಾರಿಗಳು ತಮಗಿದರ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ.

ಈ ಹಿಂದೆ ಹಲವು ಸಲ ಪರಪ್ಪನ ಅಗ್ರಹಾರ ಜೈಲಿಗೆ ಮೇಲಧಿಕಾರಿಗಳು ದಿಡೀರ್‌ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಕೈದಿಗಳ ಬಳಿ ಮೊಬೈಲ್‌ ಫೋನ್‌, ಗಾಂಜಾ ಮತ್ತಿತರ ವಸ್ತುಗಳು ದೊರೆತಿದ್ದವು. ಅದಾದ ಬಳಿಕ ಅಲ್ಲಿನ ನಿಯಮಗಳನ್ನು ಬಿಗಿ ಮಾಡಲಾಗಿದೆ. ಆದರೂ ಇಂಥ ಪ್ರಕರಣಗಳು ನಡೆಯುತ್ತಲೆ ಇವೆ ಹೊರತು ಇನ್ನೂ ಕಡಿವಾಣ ಬಿದ್ದಿಲ್ಲ.

Comments (0)
Add Comment