ಪರಿಷತ್ ಚುನಾವಣೆಯಂದೇ ರಾಜ್ಯ ಬಜೆಟ್ ಮಂಡನೆ ಬೇಡ: ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

ಬೆಂಗಳೂರು: ಚುನಾವಣೆ ದಿನದಂದು ರಾಜ್ಯ ಬಜೆಟ್ ಮಂಡಿಸುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ತಿಳಿಸಿದೆ.ರಾಜಭವನದಲ್ಲಿ ಇಂದು ಈ ಕುರಿತು ಗೌರವಾನ್ವಿತ ರಾಜ್ಯಪಾಲರಿಗೆ ಬಿಜೆಪಿ ನಿಯೋಗವು ಮನವಿ ಸಲ್ಲಿಸಿತು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು, ಚುನಾವಣಾ ಆಯೋಗವು ಬೆಂಗಳೂರಿನ ವಿಧಾನಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಜನವರಿ 23ರಂದು ಚುನಾವಣಾ ದಿನವನ್ನು ನಿಗದಿಪಡಿಸಿದೆ ಎಂದರು.

ಮತದಾನದ ದಿನವೇ ರಾಜ್ಯ ಸರಕಾರದ ಬಜೆಟ್ ಮಂಡನೆ ಆಗಲಿದೆ. ಮಾದರಿ ನೀತಿಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ ಪ್ರಕಾರ ಇದು ನ್ಯಾಯಬದ್ಧವಲ್ಲ. ಬಜೆಟ್ ದಿನವೇ ಚುನಾವಣೆ ಮಾಡುವ ಬದಲು ಬಜೆಟ್ ಮಂಡನೆ ದಿನಾಂಕವನ್ನು ಮುಂದಕ್ಕೆ ಹಾಕಲು ಕೋರಲಾಗಿದೆ. ಬಿಜೆಪಿ, ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯ ಸರಕಾರಕ್ಕೆ ಸ್ಪಷ್ಟ ಸೂಚನೆ ಕೊಡಲು ಕೋರಿದ್ದೇವೆ ಎಂದು ತಿಳಿಸಿದರು.

ಬಜೆಟ್ ಮಂಡನೆ ದಿನವನ್ನು ಮುಂದೂಡಬೇಕು. ಚುನಾವಣೆ ದಿನವೇ ಬಜೆಟ್ ಮಂಡಿಸದಂತೆ ಸೂಚಿಸಲು ಕೋರಿದ್ದೇವೆ. ರಾಜ್ಯ ಸರಕಾರಕ್ಕೆ ಈ ಕುರಿತು ಸೂಚಿಸುವುದಾಗಿ ಮಾನ್ಯ ರಾಜ್ಯಪಾಲರೂ ತಿಳಿಸಿದ್ದಾರೆ ಎಂದು ಹೇಳಿದರು.

ಇದಲ್ಲದೇ ಚುನಾವಣಾ ಆಯೋಗಕ್ಕೂ ಮನವಿ ಕೊಡಲಿದ್ದೇವೆ ಎಂದು ಹೇಳಿದರು.ಆ ದಿನ ಬಜೆಟ್ ಮಂಡಿಸಿದರೆ ಅದು ಮತದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಗಮನಕ್ಕೆ ತರಲಾಗಿದೆ ಎಂದು ವಿವರ ನೀಡಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್, ಬಸವರಾಜ್, ಮಾಜಿ ಸಚಿವರು ಮತ್ತು ರಾಜ್ಯ ಉಪಾಧ್ಯಕ್ಷರಾದ ಬೈರತಿ ಬಸವರಾಜ್, ಹರತಾಳು ಹಾಲಪ್ಪ, ಮಾಜಿ ಸಚಿವ ಮುನಿರತ್ನ, ಯುವಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜ್, ಇತರ ಪ್ರಮುಖರು ಜೊತೆಗೂಡಿ ಈ ಮನವಿ ಸಲ್ಲಿಸಿದರು.

Comments (0)
Add Comment