ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ: ಇಡೀ ದೇಶದಲ್ಲಿ ಇಂದು ಮೊಬೈಲ್ ಸೇವೆ ಸ್ಥಗಿತ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಇಡೀ ದೇಶದಲ್ಲಿ ಇಂದು ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಮತದಾನ ಪ್ರಕ್ರಿಯೆಯು ಬೆಳಗ್ಗೆ 8 ರಿಂದ ಶುರುವಾಗಿದ್ದು ಸಂಜೆ 5 ರವರೆಗೆ ನಡೆಯುತ್ತದೆ. ಪಾಕಿಸ್ತಾನದ ಎಲ್ಲಾ ಮತಗಟ್ಟೆಗಳಲ್ಲಿ 128 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರು ಇದ್ದಾರೆ. ಈ ನಡುವೆ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ದೇಶಾದ್ಯಂತ 90,675 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶದ ಒಟ್ಟು 12 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಈ ಮತದಾನದಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲಾ ನೋಂದಾಯಿತ ಮತದಾರರು 5,121 ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಚುನಾವಣೆಗಳು ಬ್ಯಾಲೆಟ್ ಪೇಪರ್‌ನಲ್ಲಿ ನಡೆಯುತ್ತಿವೆ.

ಪಾಕಿಸ್ತಾನ ಚುನಾವಣಾ ಆಯೋಗದ ಪ್ರಕಾರ, 4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ 5,121 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಿಂದ ಅಂಚೆ ಮತದಾನದ ಮೂಲಕ ಮತ ಚಲಾಯಿಸಿದರು. ಸಾರ್ವತ್ರಿಕ ಚುನಾವಣೆಗೆ ಮುನ್ನ ಭದ್ರತೆಗಾಗಿ ಪಾಕಿಸ್ತಾನವು ಅಫ್ಘಾನಿಸ್ತಾನ, ಇರಾನ್ ಗಡಿಯನ್ನು ಮುಚ್ಚಲಾಗಿದೆ.

Comments (0)
Add Comment