‘ಪ್ರಧಾನಿಯ ರಾಜಕೀಯ ಭಾಷಣದಲ್ಲಿ ಮಾಡಿರುವ ಆರೋಪವೆಲ್ಲ ಸುಳ್ಳಿನ ಕಂತೆ’- ಸಿಎಂ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು, ನಾಯಕತ್ವವನ್ನು ಬೆಂಬಲಿಸಿ ಬರುವವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಆಪರೇಷನ್ ಹಸ್ತ ಕೈಗೊಳ್ಳುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರಿಸುತ್ತಾ, ಆಪರೇಷನ್ ಹಸ್ತ ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದರು.

ಈಗಿನ ಮುಖ್ಯಮಂತ್ರಿಗಳು ಎಷ್ಟು ಅವಧಿಗೆ ಮುಖ್ಯಮಂತ್ರಿಗಳಾಗಿ ಉಳಿಯಲಿದ್ದಾರೆ ಎಂಬ ಪ್ರಧಾನಿಯವರ ರಾಜಕೀಯ ಭಾಷಣದಲ್ಲಿನ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡಬೇಕೆಂಬ ಉದ್ದೇಶದಿಂದ ಆರೋಪ ಮಾಡಲಾಗುತ್ತಿದ್ದು, ಇವೆಲ್ಲವೂ ಸುಳ್ಳಿನ ಕಂತೆ ಎಂದು ವಾಗ್ದಾಳಿ ನಡೆಸಿದ್ದಾರೆ

ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕವನ್ನೇ ಗುರಿ ಮಾಡಿ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಸೋತಿದೆ. ರಾಜ್ಯದಲ್ಲಿ ಇದುವರೆಗೆ ವಿರೋಧಪಕ್ಷದ ನಾಯಕರನ್ನು ಆಯ್ಕೆಮಾಡಿಲ್ಲ. ಇದು ಬಿಜೆಪಿಯ ದಿವಾಳಿಯಾಗಿರುವುದನ್ನು ಸೂಚಿಸುತ್ತದೆ ಎಂದು ಲೇವಡಿ ಮಾಡಿದರು.

 

ಸಿಎಂ ಮತ್ತು ಡಿಸಿಎಂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಮಂತ್ರಿಗಳ ಭಾಷಣದಲ್ಲಿ ಮಾಡಿರುವ ಟೀಕೆಗೆ ಪ್ರತ್ಯುತ್ತರ ನೀಡುತ್ತಾ, 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪ ಬಿಜೆಪಿ ಸರ್ಕಾರದದ ಮೇಲಿತ್ತು. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿಸುತ್ತಿದೆ. ದೇಶದ ಪ್ರಧಾನಿಯಾದವರು ಈ ವಿಷಯದ ಬಗ್ಗೆಯೂ ಮಾತನಾಡಬೇಕಲ್ಲವೇ? ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲ ತನಿಖಾ ಸಂಸ್ಥೆಗಳಿವೆ , ಪುರಾವೆಗಳು, ದಾಖಲೆಗಳಿಲ್ಲದೇ ಆರೋಪ ಮಾಡಬಾರದು ಎಂದರು.

ತಮ್ಮ ರಾಜಕೀಯ ಭಾಷಣದಲ್ಲಿ ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ ಎಂದರು.ಲೋಕಸಭೆ ಚುನಾವಣೆಗೂ ಮುಂಚೆ ಅಥವಾ ನಂತರ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂಬ ಯತ್ನಾಳ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿ, ಇಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಇವರಿಗೆ ಮಾತನಾಡುವ ಹಕ್ಕಿಲ್ಲ. ವಿರೋಧಪಕ್ಷ ನಾಯಕರ ಆಯ್ಕೆಯನ್ನೇ ಬಿಜೆಪಿಯವರಿಗೆ ಮಾಡಲು ಸಾಧ್ಯವಾಗಿಲ್ಲ ಎಂದರು.

Comments (0)
Add Comment