ಫೆಬ್ರವರಿ 13 ರಿಂದ ಮೂರು ದಿನಗಳ ಕಾಲ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ.!

 

ದಾವಣಗೆರೆ,:  ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯನ್ನು ಫೆಬ್ರವರಿ 13, 14 ಹಾಗೂ 15 ರಂದು ನಡೆಯಲಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಉಪ ಸಭಾಪತಿಗಳು ಹಾಗೂ ಸಂತ ಸೇವಾಲಾಲ್ ಮಹಾಮಠ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಲಮಾಣಿಯವರು ತಿಳಿಸಿದರು.

ಅವರು ಸೋಮವಾರ ಸೂರಗೊಂಡನಕೊಪ್ಪ ಮಹಾಮಠದಲ್ಲಿ ನಡೆದ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ತಾಂಡ ಅಭಿವೃದ್ದಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ದಿ ಮತ್ತು ನಿರ್ವಹಣಾ ಪ್ರತಿಷ್ಟಾನದ ಸಹಯೋಗದಲ್ಲಿ ಜಯಂತಿಯನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಇತರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಶ್ವೇತವಸ್ತ್ರ ಮಾಲಾಧಾರಿಗಳು ಭಾಗವಹಿಸಲಿದ್ದು 3 ಲಕ್ಷಕ್ಕೂ ಹೆಚ್ಚು ಭಕ್ತರು ಈ ಜಾತ್ರಾ ಮಹೋತ್ಸವದಲ್ಲ್ಲಿ ಭಾಗವಹಿಸುವರು.

ಲಕ್ಷಾಂತರ ಭಕ್ತಾಧಿಗಳು ಭಾಗವಹಿಸುವುದರಿಂದ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಸುಗಮ ಸಂಚಾರ, ಆರೋಗ್ಯ ಮತ್ತು ನೈರ್ಮಲ್ಯತೆ ಕಾಪಾಡುವುದು, ವೇದಿಕೆ ನಿರ್ಮಾಣ, ಆಸನದ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಸೇರಿದಂತೆ ಸ್ನಾನ ಮತ್ತು ಶೌಚಾಲಯದ ವ್ಯವಸ್ಥೆಯನ್ನು ತುಂಬ ಅಚ್ಚುಕಟ್ಟಾಗಿ ನೆರವೇರಿಸಬೇಕಾಗಿದೆ. ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಘಟಕಗಳ ಸ್ಥಾಪನೆ, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಹಾಗೂ ಇನ್ನಿತರೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲು ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲರೂ ಅಚ್ಚುಕ್ಟಾಗಿ ಕೆಲಸ ಮಾಡಬೇಕೆಂದರು.

ಫೆಬ್ರವರಿ 14 ರಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಮತ್ತು ಉಪಮುಖ್ಯಮಂತ್ರಿ, ಸಚಿವರು ಸೇರಿದಂತೆ ಅನೇಕ ಗಣ್ಯರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸಭೆಯಲ್ಲಿ ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಂ.ಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ತಾಂಡ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‍ನಾಯ್ಕ್, ಸಮಿತಿ ಕಾರ್ಯದರ್ಶಿ ಅರುಣ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಫೆಬ್ರವರಿ 13 ರಿಂದ ಮೂರು ದಿನಗಳ ಕಾಲ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ.!
Comments (0)
Add Comment