ಫೆ.14ರಂದು ಯುಎಇನಲ್ಲಿ ಹಿಂದೂ ದೇಗುಲ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ದುಬೈ:ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (BAPS) ನೇತೃತ್ವದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ( ಯುಎಇ) ನಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ಮೋದಿ ಫೆ.14ರಂದು ಉದ್ಘಾಟಿಸಲಿದ್ದಾರೆ.

ಯುಎಇಯ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ ಅಬುಧಾಬಿಯಲ್ಲಿ 27 ಎಕರೆ ಪ್ರದೇಶದಲ್ಲಿ ಬೃಹತ್ ಹಿಂದೂ ದೇವಸ್ಥಾನವೊಂದನ್ನು ನಿರ್ಮಿಸಲಾಗಿದ್ದು, ಇಲ್ಲಿ ಕೃಷ್ಣ-ರಾಧೆ, ಶಿವ- ಪಾರ್ವತಿ ಮತ್ತು ರಾಮ-ಸೀತೆ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರರನ್ನ ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ, 180 ಅಡಿ ಅಗಲವಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಯುಎಇನಲ್ಲಿರುವ ಇಂಡಿಯನ್ ಪೀಪಲ್ ಫೋರಂ ಅಧ್ಯಕ್ಷ ಮತ್ತು ‘ಅಹ್ಲಾನ್ ಮೋದಿ’ ಉಪಕ್ರಮದ ನಾಯಕ ಜಿತೇಂದ್ರ ವೈದ್ಯ ಅವರು, ಈಗಾಗಲೇ ಮಂದಿರ ಉದ್ಘಾಟನೆಗೆ ಸಿದ್ದತೆಗಳು ಭರದಿಂದ ಸಾಗುತ್ತಿದ್ದು, 65,000ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇದು ಅತ್ಯಂತ ವಿಶಿಷ್ಟ ಕಾರ್ಯಕ್ರಮ, ಏಕೆಂದರೆ ಈ ಕಾರ್ಯಕ್ರಮವನ್ನು ಯಾವುದೇ ಒಂದು ಸಂಸ್ಥೆ ನಡೆಸುತ್ತಿಲ್ಲ. ಇಡೀ ಸಮುದಾಯ ಸೇರಿ ನಡೆಸುತ್ತಿರುವ ಕಾರ್ಯಕ್ರಮ ಅಲ್ಲದೇ ಮೋದಿ ಅವರ ಹೆಸರು ಬಂದಾಗ, ಅಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಾರೆ. ಇದು ಮೋದಿ ಅವರ ಮೇಲೆ ಜನರಿಗೆ ಇರುವ ಪ್ರೀತಿ ಎಂದು ಶ್ಲಾಘಿಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, UAEಗೆ ನನ್ನ ಭೇಟಿಯು ಅಧಿಕಾರ ವಹಿಸಿಕೊಂಡ ನಂತರ ಏಳನೆಯದ್ದಾಗಿದೆ. ಇದು ಭಾರತ-ಯುಎಇ ಬಲವಾದ ಸ್ನೇಹಕ್ಕೆ ನಾವು ನೀಡುವ ಆದ್ಯತೆಯನ್ನು ಸೂಚಿಸುತ್ತದೆ. ಇನ್ನು ಪ್ರಮುಖವಾಗಿ ಯುಎಇಯಲ್ಲಿ ಮೊದಲ ಹಿಂದೂ ಮಂದಿರ ಉದ್ಘಾಟಿಸುವ ಗೌರವ ನನಗಿದೆ. ಅಬುಧಾಬಿಯಲ್ಲಿ ನಡೆಯುವ ಸಮುದಾಯ ಕಾರ್ಯಕ್ರಮದಲ್ಲಿ ನಾನು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments (0)
Add Comment