ಫೇಸ್​ಬುಕ್​ ಪೋಸ್ಟ್ ನೋಡಿ ಮನೆ ಕೆಲಸಕ್ಕೆ ಸಹಾಯಕರನ್ನು ಸೇರಿಸಿಕೊಳ್ಳುವವರೇ ಎಚ್ಚರ!

ಬೆಂಗಳೂರು:ಫೇಸ್​ಬುಕ್​ನಲ್ಲಿ ಪೋಸ್ಟ್​​ ಮಾಡಿ ಮನೆ ಕೆಲಸ ಗಿಟ್ಟಿಸಿಕೊಂಡು ಆಮೇಲೆ ಕೆಲಸ ಮಾಡುತ್ತಿರುವ ಮನೆಯಲ್ಲೇ ಕಳ್ಳತನ ಮಾಡಿ ಪರಾರಿಯಾಗುವ ಬಾಂಬೆ ಮಹಿಳೆಯರ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಅಗಿದ್ದ ಗ್ಯಾಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಬಂಧಿತರು ಮುಂಬೈನ ಹಲವೆಡೆ ಇಂಥದ್ದೇ ಕೃತ್ಯ ಎಸಗಿ ಅಲ್ಲಿನ ಪೊಲೀಸರಿಗೆ ಬೇಕಾಗಿದ್ದವರು ಎಂಬುದು ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು ವನಿತಾ, ಯಶೋದಾ ಎಂದು ಗುರುತಿಸಲಾಗಿದೆ. ಇವರು ಮುಂಬೈಯ ಹಲವೆಡೆ ಮನೆಗಳಲ್ಲಿ ಕಳ್ಳತನ ಮಾಡಿ ಬಂಧನಕ್ಕೂ ಒಳಗಾಗಿದ್ದರು. ಮನೆಕೆಲಸದವರಿಂದ ಕಳ್ಳತನವಾಗಿದೆ ಎಂಬ ದೂರು ಬಂದರೆ ಮುಂಬೈ ಪೊಲೀಸರು ಮೊದಲು ಈ ಆರೋಪಿಗಳನ್ನೇ ಹುಡುಕುತ್ತಿದ್ದರು. ಮುಂಬೈನಲ್ಲಿ ಸುಮಾರು 36 ಪ್ರಕರಣಗಳಲ್ಲಿ ಶಾಮೀಲಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್​ಗಳಿಗೆ ಕಮಿಷನ್ ಕೊಟ್ಟು ಮಹಿಳೆಯರು ಮನೆಕೆಲಸಕ್ಕೆ ಸೇರುತ್ತಿದ್ದರು ಎನ್ನಲಾಗಿದೆ. ಅಲ್ಲಿ ಪೊಲೀಸರು ಹೆಚ್ಚಿನ ನಿಗಾ ಇಟ್ಟ ಬಳಿಕ ಬೆಂಗಳೂರಿಗೆ ಬಂದು ಕೈಚಳಕ ತೋರಿದ್ದಾರೆ.

ಮನೆ ಕೆಲಸದವರು ಬೇಕಿದ್ದರೆ ಸಂಪರ್ಕಿಸಿ ಎಂದು ಸಾಮಾಜಿಕ ಮಾಧ್ಯಮ ಫೇಸ್​ಬುಕ್​ನಲ್ಲಿ ಜಾಹೀರಾತು ನೀಡುತ್ತಿದ್ದ ಮಹಿಳೆಯರು, ಅದನ್ನು ನೋಡಿ ಸಂಪರ್ಕಿಸಿದವರ ಮನೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ರೆಫರ್ ಹೌಸ್ ಮೇಡ್’ ಎಂಬ ವಿವಿಧ ಗ್ರೂಪ್​​​​ಗಳಲ್ಲಿ ಸಕ್ರಿಯರಾಗಿದ್ದಾರೆ. ಗ್ರೂಪ್​​ನಲ್ಲಿ ಸಂಪರ್ಕ ಮಾಡಿದವರ ಮನೆಗೆ ಹೋಗಿ ಕೆಲಸಕ್ಕೆ ಸೇರುತ್ತಿದ್ದ ಇವರು ತುಂಬಾ ಒಳ್ಳೆಯವರಂತೆ ಮಾಲೀಕರ ವಿಶ್ವಾಸಗಳಿಸುತ್ತಿದ್ದರು. ಬಳಿಕ ಎರಡು ಮೂರು ದಿನಗಳಲ್ಲೆ ಕಳ್ಳತನ ಮಾಡ್ತಿದ್ದರು. ಸಂಪರ್ಕಕ್ಕೆ ಮುಂಬಯಿಯಲ್ಲಿ ಪಿಕ್ ಪಾಕೇಟ್ ಮಾಡಿದ್ದ ಮೊಬೈಲ್ ನಂಬರ್ ಹಾಗೂ ನಕಲಿ ಆಧಾರ್ ಕಾರ್ಡ್ ನೀಡ್ತಿದ್ದರು.

Comments (0)
Add Comment