‘ಬಡವರ, ರೈತವಿರೋಧಿ ಕಾಂಗ್ರೆಸ್ ಸರಕಾರ ವಿರುದ್ಧ ಹೋರಾಟ’-ವಿಜಯೇಂದ್ರ

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರಕಾರವು ಬಡಜನರ, ರೈತರ ವಿರೋಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇದು ರೈತವಿರೋಧಿ ಸರಕಾರ. ಬಡವರು, ರೈತರು ಈ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಬರಗಾಲದ ಕುರಿತು ನಿರ್ಲಕ್ಷ್ಯ ವಹಿಸಿದ ಕಾಂಗ್ರೆಸ್ ಸರಕಾರವನ್ನು ಎಚ್ಚರಿಸುವ ಕಾರ್ಯವನ್ನು ರಾಜ್ಯಾಧ್ಯಕ್ಷನಾಗಿ ನಾನು ಮತ್ತು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು, ನಮ್ಮೆಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಹಿರಿಯ ನಾಯಕರು ಒಗ್ಗಟ್ಟಾಗಿ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಮುಂದಿನ ಲೋಕಸಭಾ ಚುನಾವಣೆಯು ಈ ದೇಶದ ದಿಕ್ಕನ್ನು ಬದಲಾಯಿಸುವ ಮಹತ್ವದ ಚುನಾವಣೆ. ಅದು ರಾಜ್ಯದ ರಾಜಕೀಯ ದಿಕ್ಕನ್ನು ಬದಲಾಯಿಸಲಿದೆ. ರಾಜ್ಯ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು 3ನೇ ಬಾರಿಗೆ ದೇಶದ ಪ್ರಧಾನಿ ಆಗಬೇಕು. ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ರಾಜ್ಯ ಸರಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ ಎಂದು ತಿಳಿಸಿದರು.

ಇದಕ್ಕಾಗಿ ನಾವು, ನೀವೆಲ್ಲರೂ ಜೊತೆಗೂಡಿ ಪಕ್ಷ ಬಲಪಡಿಸುವ ಕಾರ್ಯ ಮಾಡೋಣ. ಮೋದಿಜೀ ಅವರ ಕೈಗಳನ್ನು ಬಲಪಡಿಸೋಣ ಎಂದು ವಿನಂತಿಸಿದರು. ಮತ್ತೊಮ್ಮೆ ಆರ್.ಅಶೋಕ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

Comments (0)
Add Comment