ಬರ ಪರಿಹಾರದ ಅನುದಾನ ಬಿಡುಗಡೆ ಕೇಂದ್ರ ಸರ್ಕಾರ ಕಾರಣವಲ್ಲ.! ನಿರ್ಮಲಾ ಸೀತಾರಾಮನ್

 

 

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರದ ಅನುದಾನ ಬಿಡುಗಡೆ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ. ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗದ ಅನುಮತಿ ಬಾರದಿರುವುದು ವಿಳಂಬಕ್ಕೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಮಾಧ್ಯಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರ ಸಚಿವಾಲಯ ಅಧಿಕಾರಿಗಳ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಕೃಷಿ ಮತ್ತು ಗೃಹ ಸಚಿವಾಲಯಗಳು ಪರಿಶೀಲನೆ ನಡೆಸಿದ್ದವು. ಆದರೆ, ಅಷ್ಟರಲ್ಲೇ ಚುನಾವಣೆ ಘೋಷಣೆಯಾಯಿತು. ಆಯೋಗದ ಅನುಮತಿ ದೊರಕದೇ ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂದರು.

ಕರ್ನಾಟಕ ಮಾತ್ರವಲ್ಲ, ತೆಲಂಗಾಣ, ತಮಿಳುನಾಡು, ಸಿಕ್ಕಿಂ, ಮಿಜೋರಾಂ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಡಿ ನೆರವು ನೀಡುವ ಪ್ರಸ್ತಾವಗಳು ಉನ್ನತಾಧಿಕಾರ ಸಮಿತಿ ಮುಂದಿವೆ. ಚುನಾವಣಾ ಆಯೋಗದ ಅನುಮತಿ ದೊರಕಿದ ಬಳಿಕವೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕೇಂದ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎಫ್) ಕಾಯ್ದೆಯಲ್ಲಿ ಪರಿಹಾರ ವಿತರಣೆ ಅವಕಾಶ ಇಲ್ಲ. ಪರಿಹಾರ, ನೆರವು, ಮಧ್ಯಂತರ ಪರಿಹಾರ ಎಂಬ ಉಲ್ಲೇಖಗಳೇ ಇಲ್ಲ. ಕೇಂದ್ರ ಸರ್ಕಾರ ಇನ್ಪುಟ್ ಸಹಾಯಧನ ಮತ್ತು ಪರಿಸ್ಥಿತಿ ಸುಧಾರಣೆಗೆ ಸಹಾಯಧನವನ್ನು ಮಾತ್ರ ನೀಡುತ್ತದೆ ಎಂದರು.

 

ಬರ ಪರಿಹಾರದ ಅನುದಾನ ಬಿಡುಗಡೆ ಕೇಂದ್ರ ಸರ್ಕಾರ ಕಾರಣವಲ್ಲ.! ನಿರ್ಮಲಾ ಸೀತಾರಾಮನ್
Comments (0)
Add Comment