ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 9 ತಿಂಗಳ ಮಗು ಸೇರಿ ನಾಲ್ವರ ಸಾವು

ನವದೆಹಲಿ: ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿದ್ದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂಬತ್ತು ತಿಂಗಳ ಹೆಣ್ಣು ಮಗು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ನವದೆಹಲಿಯ ಶಹಾದಾರ್ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಅಗ್ನಿ ಅವಘಡ ಸಂಭವಿಸಿದ ಮನೆಯಲ್ಲಿ ಮಗು ಸೇರಿದಂತೆ 7 ಮಂದಿ ವಾಸಿಸುತ್ತಿದ್ದರು. ಈ ಪೈಕಿ ಮಗು ಸೇರಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಉಳಿದ ಮೂವರನ್ನು ರಕ್ಷಿಸಲಾಗಿದೆ.

ಘಟನೆ ವೇಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಒಂಬತ್ತು ತಿಂಗಳ ಮಗು ಹಾಗೂ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೆ ಅವರೆಲ್ಲರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡದ ನೆಲ ಅಂತಸ್ತಿನ ಮನೆಯೊಂದರಲ್ಲಿ ಇರಿಸಲಾಗಿದ್ದ ವೈಪರ್ ಗಳು ಹಾಗೂ ರಬ್ಬರ್ ಕತ್ತರಿಸುವ ಯಂತ್ರದಂತಹ ರಬ್ಬರ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದ್ದಾರೆ. ಇನ್ನು ಈ ಕಟ್ಟಡವು ನಾಲ್ಕು ಮಹಡಿಗಳನ್ನು ಹೊಂದಿದ್ದು, ಘಟನೆಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕ ಭರತ್ ಸಿಂಗ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.

Comments (0)
Add Comment