ಬಾಯಿಯಲ್ಲಿ ಅಥವಾ ನಾಲಗೆಯಲ್ಲಿ ಬಿಳಿ ಲೇಪನ ಸಂಗ್ರಹ ಆಗ್ತಿದ್ಯಾ?

ಕೆಲವೊಮ್ಮೆ ನಮ್ಮ ನಾಲಗೆಯಲ್ಲಿ ಬಿಳಿ ಲೇಪನವೊಂದು ಸಂಗ್ರಹಗೊಳ್ಳುತ್ತದೆ. ಇದು ಚಿಕ್ಕ ಸಮಸ್ಯೆ ಎಂದುಕೊಂಡು ನಿರ್ಲಕ್ಷ್ಯ ತೋರಿದರೆ ಮುಂದೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಇದರ ನಿವಾರಣೆಯ ಬಗ್ಗೆ ಮಾಹಿತಿ ಇಲ್ಲಿದೆ.

ಕೆಟ್ಟ ಆಹಾರ ಪದ್ದತಿಯೇ ಈ ರೀತಿಯ ಸಮಸ್ಯೆಗೆ ಮುಖ್ಯ ಕಾರಣ. ಇದು ಬ್ಯಾಕ್ಟೀರಿಯಾ ಆಗಿದ್ದು ಬಾಯಿಯ ದುರ್ವಾಸನೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಕಾರಣವೇನು?

ಬಾಯಿಯನ್ನು ಸರಿಯಾಗಿ ಶುಚಿಗೊಳಿಸದೇ ಇರುವುದು, ಬಾಯಿಯಲ್ಲಿನ ಶುಷ್ಕತೆ, ಸಾಕಷ್ಟು ನೀರು ಕುಡಿಯದೇ ಇರುವುದು, ಧೂಮಪಾನ, ಮದ್ಯಪಾನ, ಮೃದುವಾದ ಮತ್ತು ಹಿಸುಕಿದ ಆಹಾರ ಸೇವನೆ, ಜ್ವರ ಮುಂತಾದವುಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕೆಲವೊಮ್ಮೆ ಇದು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ಎಚ್ಚರಿಸುತ್ತಾರೆ ಆರೋಗ್ಯ ತಜ್ಞರು. ಶೀತ ಹುಣ್ಣುಗಳು, ಲ್ಯುಕೋಪ್ಲಾಕಿಯಾ, ಬಾಯಿಯ ಕ್ಯಾನ್ಸರ್, ನಾಲಗೆ ಕ್ಯಾನ್ಸರ್ ಮುಂತಾದವುಗಳ ಸೂಚಕವೂ ಆಗಿರುವ ಸಾಧ್ಯತೆ ಇದೆ.

ಪರಿಹಾರ

ನಾಲಗೆ ಸ್ವಚ್ಛಗೊಳಿಸಿ

ಬೆಳಗ್ಗೆ ಹಲ್ಲುಜ್ಜುವಾಗ ನಾಲಗೆಯನ್ನೂ ಸ್ವಚ್ಛಗೊಳಿಸಬೇಕು. ಇದಕ್ಕೆ ಟಂಗ್ ಕ್ಲೀನರ್ ಬಳಸಬಹುದು ಅಥವಾ ಬ್ರೆಷ್ ನಿಂದಲೂ ಕ್ಲೀನ್ ಮಾಡಿಕೊಳ್ಳಬಹುದು.

ತ್ರಿಫಲ ನೀರು

ನಾಲಗೆಯ ಬಿಳಿ ಪದರ ಹೋಗಲಾಡಿಸಲು ಆಯುರ್ವೇದದ ಪರಿಣಾಮಕಾರಿ ಔಷಧಗಳಲ್ಲಿ ತ್ರಿಫಲ ನೀರು ಕೂಡ ಒಂದು. ಇದು ನಂಜು ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಬಾಯಿಯನ್ನು ಸ್ವಚ್ಛವಾಗಿಡುತ್ತದೆ.

 

ಬಿಸಿ ನೀರು ಸೇವನೆ

ಆಗಾಗ, ಸಾಕಷ್ಟು ಪ್ರಮಾಣದಲ್ಲಿ ಬಿಸಿ ನೀರು ಕುಡಿಯುತ್ತಿರಬೇಕು. ಇದು ಕರುಳಿನ ಆರೋಗ್ಯವನ್ನು ಕಾಪಾಡುವ ಜೊತೆಗೆ ತ್ಯಾಜ್ಯವನ್ನು ಶರೀರದಿಂದ ಹೊರ ಹಾಕಲು ನೆರವಾಗುತ್ತದೆ.

ಸೋಂಪು ಕಾಳು ಸೇವಿಸಿ

ಊಟದ ಬಳಿಕ ಸೋಂಪು ಕಾಳುಗಳನ್ನು ಸೇವಿಸಬೇಕು. ಸೋಂಪು ಕಾಳು ಆರೊಮ್ಯಾಟಿಕ್ ಎಣ್ಣೆಯ ಅಂಶವನ್ನು ಒಳಗೊಂಡಿದ್ದು, ಹಲ್ಲು, ನಾಲಗೆಯನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ.

ಸಿಹಿ ತಿಂಡಿಯ ಅತಿಯಾದ ಬಳಕೆ ಬೇಡ

ಬಾಯಿಯ ಆರೋಗ್ಯಕ್ಕೆ ಅತಿಯಾದ ಸಿಹಿ ತಿಂಡಿ ಸೇವನೆ ಮಾರಕ. ಅದರಲ್ಲೂ ರಾತ್ರಿ ಸಿಹಿ ಪಧಾರ್ಥ ಸೇವಿಸಲೇ ಬಾರದು. ಇದರಿಂದ ಬಾಯಿಯಲ್ಲೇ ಬ್ಯಾಕ್ಟಿರಿಯಾ ಉಳಿದುಕೊಳ್ಳುತ್ತದೆ.

 

Comments (0)
Add Comment